More

    ಆರ್ಥಿಕ ಪ್ಯಾಕೇಜ್​ನ 4ನೇ ಭಾಗದಲ್ಲಿ ಈ ಎಂಟು ವಲಯಗಳಿಗೆ ಒತ್ತು; ಖಾಸಗೀಕರಣಕ್ಕೆ ಮಹತ್ವ

    ಕೊವಿಡ್​-19 ನಿರ್ವಹಣೆಯ 20 ಲಕ್ಷ ಕೋಟಿ ರೂಪಾಯಿಯ ಆತ್ಮ ನಿರ್ಭರ ವಿಶೇಷ ಆರ್ಥಿಕ ಪ್ಯಾಕೇಜ್​ ಮೂರು ಚರಣಗಳನ್ನು ಹಂಚಿಕೆ ಮಾಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಇಂದಿನ ಸುದ್ದಿಗೋಷ್ಠಿಯ ಮುಖ್ಯಾಂಶಗಳು..

    ಜಿಎಸ್​ಟಿಯಿಂದಾಗೊ ಒಂದು ದೇಶ, ಒಂದು ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗಿದೆ. ಗರೀಬ್​ ಕಲ್ಯಾಣ್​ ಯೋಜನೆಯಡಿ ಹಲವು ಬಡವಿಗೆ ನೆರವು ನೀಡಲಾಗಿದೆ. ಸುಲಭ ಉದ್ಯಮಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬ್ಯಾಂಕಿಂಗ್​ ಕ್ಷೇತ್ರದ ಸುಧಾರಣೆಗೆ ಮಹತ್ವ ನೀಡಲಾಗಿದೆ. ಸಮಗ್ರ ದೇಶದ ರಚನಾತ್ಮಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಇಂದಿನ ಘೋಷಣೆ ಇರಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

    ಉದ್ಯಮ ಆರಂಬಿಸಲು ಮೇಕ್​ ಇನ್​ ಇಂಡಿಯಾಕ್ಕೆ ಹೊಸ ಪರಿಕಲ್ಪನೆ ನೀಡಲಾಗುವುದು. ಹೊಸ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವುದಕ್ಕೋಸ್ಕರ ಕಠಿಣ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗುವುದು. ರಾಜ್ಯಗಳನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಇಂದು ಉದ್ಯೋಗ ಸೃಷ್ಟಿಸುವ ರಚನಾತ್ಮಕ ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ. ಇದರಿಂದ ಮುಂದಿನ ಪೀಳಿಗೆಗೆ ಅನುಕೂಲ ಆಗುತ್ತದೆ.

    ಕಲ್ಲಿದ್ದಲು, ಖನಿಜ ಸಂಪತ್ತು, ರಕ್ಷಣಾ ಉತ್ಪಾದನೆ, ವಿಮಾನಯಾನ ನಿರ್ವಹಣೆ, ಎಂಆರ್‌ಒಗಳು,  ವಿದ್ಯುತ್ ವಿತರಣಾ ಕಂಪನಿಗಳು, ಬಾಹ್ಯಾಕಾಶ ಕ್ಷೇತ್ರ ಮತ್ತು ಪರಮಾಣು ಶಕ್ತಿ ಸೇರಿ ಒಟ್ಟು  8 ವಲಯಗಳಲ್ಲಿ ಸುಧಾರಣೆಗೆ ಇವತ್ತಿನ ಪ್ಯಾಕೇಜ್​ನಲ್ಲಿ ಒತ್ತು ನೀಡಲಾಗಿದೆ. ಕೈಗಾರಿಕೆಗಳಿಗೆ 5 ಲಕ್ಷ ಹೆಕ್ಟೇರ್​ ಭೂಮಿ ಮೀಸಲಾಗಿಟ್ಟು, 3,376 ಕೈಗಾರಿಕಾ ವಲಯಗಳ ಸ್ಥಾಪನೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದರು.

    ಕಲ್ಲಿದ್ದಲು

    ನಾವು ಇನ್ನೂ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿದ್ದೇವೆ. ಅದರ ಪ್ರಮಾಣವನ್ನು ತಗ್ಗಿಸಲು ಕಲ್ಲಿದ್ದಲು ವಲಯದಲ್ಲಿ ವಾಣಿಜ್ಯ ಗಣಿಗಾರಿಕೆಗೆ ಆದ್ಯತೆ ನೀಡಲಾಗುವುದು. ಹಾಗೇ ಆದಾಯ ಹಂಚಿಕೆ ಆಧಾರದಲ್ಲಿ ದೇಶೀಯ ಕಲ್ಲಿದ್ದಲು  ಗಣಿಗಾರಿಕೆಗೆ ಒತ್ತು ನೀಡಲಾಗುವುದು. ಕಲ್ಲಿದ್ದಲು ಹರಾಜಿಗೆ ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗುವುದು.

    2023-24ರ ಹೊತ್ತಿಗೆ 1 ಬಿಲಿಯನ್​ ಟನ್​ ಕಲ್ಲಿದ್ದಲು ಉತ್ಪಾದನೆಯ ಗುರಿಯೊಂದಿಗೆ, ಕಲ್ಲಿದ್ದಲು ವಲಯ ಉತ್ತೇಜನಕ್ಕೆ 50,000 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಹೇಳಿದರು.

    ಖನಿಜ ಸಂಪತ್ತು

    ಇನ್ನು ಖನಿಜ ವಲಯಕ್ಕೆ ಬಂದರೆ 500 ಖನಿಜ ಗಣಿಗಾರಿಕೆಗಳನ್ನು ಖಾಸಗೀಕರಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಹರಾಜು ನಡೆಸಲಾಗುವುದು. ಅದರ ಪ್ರಕ್ರಿಯೆಗಳು ನಡೆಯುತ್ತಿವೆ. ಅಲ್ಯೂಮಿನಿಯಂ ಕೈಗಾರಿಕೆಗಳ ವಿದ್ಯುತ್​ ಬಿಲ್​ನಲ್ಲಿ ಕಡಿತ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದರು.

    ರಕ್ಷಣಾ ವಸ್ತುಗಳ ತಯಾರಿಕೆ

    ನಮ್ಮ ಸೈನಿಕರಿಗೆ ಆಧುನಿಕ ತಂತ್ರಜ್ಞಾನಗಳುಳ್ಳ ರಕ್ಷಣಾ ಸಾಧನಗಳನ್ನು ಒದಗಿಸುವ ಅಗತ್ಯವಿದೆ. ಆದರೆ ಅದೆಷ್ಟೋ ಸಾಧನಗಳು ಭಾರತದಲ್ಲಿ ಉತ್ಪಾದನೆಯಾಗುವುದಿಲ್ಲ. ಹೀಗಾಗಿ ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಮೇಕ್​ ಇನ್​ ಇಂಡಿಯಾ ಅತ್ಯವಶ್ಯಕ ಎಂದು ಹೇಳಿದರು.

    ಕೆಲವು ರಕ್ಷಣಾ ಉಪಕರಣಗಳ ಆಮದಿಗೆ ನಿರ್ಬಂಧ ವಿಧಿಸಲಾಗುವುದು. ಹಾಗೇ ಹೈಟೆಕ್​ ರಕ್ಷಣಾ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುವುದು.ರಕ್ಷಣಾ ಉಪಕರಣಗಳ ಎಫ್​ಡಿಐ (ವಿದೇಶಿ ನೇರ ಬಂಡವಾಳ ಹೂಡಿಕೆ) ಶೇ.49ರಿಂದ ಶೇ.74ಕ್ಕೆ ಏರಿಕೆ ಮಾಡಲಾಗುವುದು.

    ನಾಗರಿಕ ವಿಮಾನಯಾನ

    ನಮ್ಮಲ್ಲಿ ವಿಮಾನ ಹಾರಾಟಕ್ಕೆ ಸದ್ಯ ಶೇ.60ರಷ್ಟು ವಾಯುಪ್ರದೇಶ ಮಾತ್ರ ಲಭ್ಯವಿದೆ. ಹೀಗಾಗಿ ಭಾರತೀಯ ವಾಯುಪ್ರದೇಶದ ಬಳಕೆಯ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿ, ಇನ್ನಷ್ಟು ಸುಧಾರಣೆ ಮಾಡುವ ದೃಷ್ಟಿಯಿಂದ ಹೆಚ್ಚಿನ ಪ್ರದೇಶಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ವಿಶ್ವ ದರ್ಜೆಯ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು. ಈ ವಲಯಕ್ಕೆ ವಾರ್ಷಿಕ ಒಂದು ಸಾವಿರ ಕೋಟಿ ರೂ.ಮೀಸಲಾಗಿಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹಣಕಾಸು ಸಚಿವೆ ತಿಳಿಸಿದರು.

    ವಿಮಾನ ನಿಲ್ದಾಣಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗಳಿಗಾಗಿ ವಿಮಾನಯಾನ ಪ್ರಾಧಿಕಾರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಇ)ದ ಆಧಾರದ ಮೇಲೆ, ಒಟ್ಟು ಆರು ವಿಮಾನ ನಿಲ್ದಾಣಗಳಲ್ಲಿ ಮೂರರ ಹರಾಜು ಕರೆದಿದೆ ಎಂದು ಹೇಳಿದರು.

    ವಿದ್ಯುತ್​ ವಿತರಕ ಕಂಪನಿಗಳು

    ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿದ್ಯುತ್​ ವಿತರಣ ಕಂಪನಿಗಳನ್ನು (ಡಿಸ್ಕಾಂ) ಶೀಘ್ರದಲ್ಲೇ ಖಾಸಗೀಕರಣ ಮಾಡಲಾಗುವುದು. ಹಾಗೇ ವಿದ್ಯುತ್​ ವಿತರಣಾ ಕಂಪನಿಗಳಿಗೆ ಡಿಜಿಟಲ್​ ಮುಂಗಡ ಪಾವತಿಗೆ ವಿನಾಯಿತಿ ನೀಡಲಾಗಿದ ಎಂದರು.

    ಪರಿಷ್ಕರಿಸಿದ ಕಾರ್ಯಸಾಧ್ಯತೆಯ ಅಂತರ ನಿಧಿ ಯೋಜನೆಯಡಿ, ಸಾಮಾಜಿಕ ಮೂಲಸೌಕರ್ಯಗಳ ಕ್ಷೇತ್ರದಲ್ಲಿ ಖಾಸಗಿ ವಲಯಗಳ ಹೂಡಿಕೆಯನ್ನು ಹೆಚ್ಚಿಸಲು 8100 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಹೇಳಿದರು.

    ಬಾಹ್ಯಾಕಾಶ ಕ್ಷೇತ್ರ

    ಖಾಸಗಿಯವರಿಗೂ ಬಾಹ್ಯಾಕಾಶ ಚಟುವಟಿಕೆಗೆ ಅವಕಾಶ ಮಾಡಿಕೊಡಲಾಗುವುದು. ಸ್ಯಾಟಲೈಟ್​ ಉಡಾವಣೆಗೂ ಖಾಸಗಿ ಸಹಭಾಗಿತ್ವಕ್ಕೆ ಮನ್ನಣೆ ನೀಡಲಾಗುವುದು. ಗ್ರಹಗಳ ಶೋಧನೆ ಸೇರಿ, ಬಾಹ್ಯಾಕಾಶ ಚಟುವಟಿಕೆಗಳನ್ನ ನಡೆಸಲು ಖಾಸಗೀಯವರೂ ಕೂಡ ಇಸ್ರೋ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು ಎಂದು ಹೇಳಿದರು.

    ಪರಮಾಣು ಶಕ್ತಿ

    ಭಾರತದಲ್ಲಿ ಸಂಶೋಧನಾ ವ್ಯವಸ್ಥೆಗಳು ಮತ್ತು ಟೆಕ್​ ಉದ್ಯಮಿಗಳ ನಡುವೆ ಸಹಕಾರ ಮೂಡಿಸಲು ಸಂಯೋಜನಾ ಕೇಂದ್ರಗಳನ್ನು ನಿರ್ಮಾಣ ಮಾಡಲಾಗುವುದು. ಪಿಪಿಪಿ ಆಧಾರದಲ್ಲಿ, ಸಂಶೋಧನಾ ಅಣುಕೇಂದ್ರಗಳ ಸ್ಥಾಪನೆ ಮಾಡಿ, ವೈದ್ಯಕೀಯ ಐಸೋಟೋಪ್​ಗಳ ಉತ್ಪಾದನೆ ಮಾಡಲಾಗುವುದು.ಈ ಮೂಲಕ ಕ್ಯಾನ್ಸರ್​ ಮತ್ತು ಅಂತಹ ಮಾರಕ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲಾಗವುದು ಎಂದು ಮಾಹಿತಿ ನೀಡಿದರು.

    ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ (ಎಂಆರ್​ಒ)

    ವಿಮಾನ ಘಟಕ ದುರಸ್ತಿ ಮತ್ತು ಏರ್​ಫ್ರೇಮ್​ಗಳ ನಿರ್ವಹಣೆಗಾಗಿ ಮೀಸಲಿಡುವ 800 ಕೋಟಿ ರೂ. ನ್ನು ಇನ್ನು ಮೂರು ವರ್ಷಗಳಲ್ಲಿ 2000 ಕೋಟಿ ರೂ.ಗೆ ಏರಿಸಲಾಗುವುದು. ಜಾಗತಿಕ ಮಟ್ಟದ ಪ್ರಮುಖ ಎಂಜಿನ್​ ತಯಾರಕರು ಮುಂಬರುವ ವರ್ಷಗಳಲ್ಲಿ ಭಾರತದಲ್ಲಿಯೂ ಕೂಡ ಎಂಜಿನ್​ ತಯಾರಿಕಾ ಘಟಕಗಳನ್ನು ಸ್ಥಾಪಿಸಲಿದ್ದಾರೆ. ಆರ್ಥಿಕತೆ ಉತ್ತೇಜನಕ್ಕಾಗಿ ರಕ್ಷಣಾ ವಲಯ ಮತ್ತು ನಾಗರಿಕ ಎಂಆರ್​ಒಗಳ ಸಂಯೋಜನಾ ಕೇಂದ್ರವನ್ನು ಸ್ಥಾಪಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts