ಸುಧಾರಣೆಗೆ ಒತ್ತು; ಕರೊನಾ ನಂತರ ಸನ್ನಿವೇಶ ನಿರ್ವಹಣೆಗೆ ವಿಶೇಷ ಪ್ರಯತ್ನ ಅಗತ್ಯ

Editorial
Published on

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕೌನ್ಸಿಲ್​ನ 45ನೇ ಸಭೆ ಶುಕ್ರವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಲಖನೌದಲ್ಲಿ ಸಂಪನ್ನಗೊಂಡಿದೆ. ಪೆಟ್ರೋಲ್, ಡೀಸೆಲನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಪ್ರಸ್ತಾವನೆಯೇ ಈ ಸಭೆ ಮುಂದೆ ಬರಲಿಲ್ಲ. ಇಂಧನವನ್ನು ಜಿಎಸ್​ಟಿ ವ್ಯಾಪ್ತಿಗೆ ತರಲು ಪರಿಶೀಲಿಸುವಂತೆ ಕೇರಳ ಹೈಕೋರ್ಟ್ ಈ ಜೂನ್​ನಲ್ಲಿ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ‘ಒಂದು ದೇಶ ಒಂದು ಬೆಲೆ’ ಕುರಿತಂತೆ ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತಾದಾರೂ, ರಾಜ್ಯಗಳ ಆದಾಯಕ್ಕೆ ಭಾರಿ ಪೆಟ್ಟು ಬೀಳುವ ಕಾರಣದಿಂದ ಉತ್ತರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡ, ಛತ್ತೀಸ್​ಗಢ, ಕೇರಳ ಸೇರಿದಂತೆ ಬಹುತೇಕ ರಾಜ್ಯಗಳು ವಿರೋಧ ತೋರಿದ್ದವು. ಜಿಎಸ್​ಟಿ ವ್ಯಾಪ್ತಿಗೆ ತಂದಿದ್ದರೆ ಪೆಟ್ರೋಲ್ ಬೆಲೆ ಲೀಟರಿಗೆ 28 ರೂಪಾಯಿ ಹಾಗೂ ಡೀಸೆಲ್ ಬೆಲೆ 25 ರೂಪಾಯಿ ತಗ್ಗಿ, 80ರ ಆಸುಪಾಸಿನಲ್ಲಿ ಸ್ಥಿರವಾಗುತ್ತಿತ್ತು ಎಂಬುದು ತಜ್ಞರ ಅಂಬೋಣ. ಆದರೆ, ರಾಜ್ಯ ಸರ್ಕಾರಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಈ ಪ್ರಸ್ತಾವದಿಂದ ಕೇಂದ್ರ ಹಿಂದೆ ಸರಿದಿದೆ. ಈ ಬಗ್ಗೆ ಮತ್ತಷ್ಟು ಚಿಂತನೆ ನಡೆಸಿ, ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸುವ ಅಗತ್ಯವಿದೆ.

ಕೋವಿಡ್ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಕೋವಿಡ್ ಸಂಬಂಧಿ ಔಷಧಗಳಿಗೆ ತೆರಿಗೆ ವಿನಾಯ್ತಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ. ಇದು ಮುಂಚೆ ಸೆಪ್ಟೆಂಬರ್ 30ರವರೆಗೆ ಇತ್ತು. ಕ್ಯಾನ್ಸರ್ ಸಂಬಂಧಿ ಚಿಕಿತ್ಸೆಯ ಔಷಧಗಳ ಮೇಲಿನ ಜಿಎಸ್​ಟಿಯನ್ನು ಶೇಕಡ 12ರಿಂದ 5ಕ್ಕೆ, ಬಯೋ ಡೀಸೆಲ್ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ತಗ್ಗಿಸುವ ಮೂಲಕ ಮಹತ್ವದ ನಿರ್ಧಾರವನ್ನು ಜಿಎಸ್​ಟಿ ಮಂಡಳಿ ಕೈಗೊಂಡಿದೆ. ಹಾಗೆಯೇ, ಸರ್ಕಾರವೇ ಶೇ.75ರಷ್ಟು ವೆಚ್ಚ ಮಾಡಿ ನಡೆಸುವ ತರಬೇತಿ ಕಾರ್ಯಕ್ರಮಗಳನ್ನು ಜಿಎಸ್​ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆಹಾರ ಸರಬರಾಜು ಮಾಡುವ ಆಪ್​ಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ ಎಂಬ ಊಹಾಪೋಹಕ್ಕೆ ತೆರೆಬಿದ್ದಿದೆ. ತೆರಿಗೆ ಹೆಚ್ಚಳದ ಕ್ರಮವನ್ನು ಜಿಎಸ್​ಟಿ ಮಂಡಳಿ ಕೈಗೊಂಡಿಲ್ಲ.

ಮುಖ್ಯವಾಗಿ, ಕರೊನಾ ನಿಯಂತ್ರಿಸಲು ವಿಧಿಸಲಾಗಿದ್ದ ಲಾಕ್​ಡೌನ್ ಆರ್ಥಿಕತೆ ಮತ್ತು ಉದ್ಯಮರಂಗಕ್ಕೆ ಆಘಾತ ನೀಡಿದೆ. ಹಾಗಾಗಿ, ಉದ್ಯಮರಂಗ ಅದರಲ್ಲೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಚೇತರಿಕೆ ದೃಷ್ಟಿಯಲ್ಲಿ ತೆರಿಗೆ ವಿನಾಯಿತಿಯಂಥ ಕ್ರಮಗಳನ್ನು ನೀರಿಕ್ಷಿಸಿತ್ತು. ಈ ಹಿಂದೆಯೇ ಪ್ಯಾಕೇಜ್ ಘೋಷಣೆ ಮಾಡಿದ್ದ ಕೇಂದ್ರ, ಜಿಎಸ್​ಟಿಯಲ್ಲಿ ಯಾವುದೇ ವಿನಾಯ್ತಿ ಘೋಷಿಸಿಲ್ಲ. ಆರ್ಥಿಕತೆಯ ಚೇತರಿಕೆಗೆ ಈಗಿನ ಸನ್ನಿವೇಶದಲ್ಲಿ ಪ್ರೋತ್ಸಾಹಕ ಹಾಗೂ ದಿಟ್ಟ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯಂತೂ ಜನಸಾಮಾನ್ಯರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಲೆ ನಿಯಂತ್ರಣದ ದೃಷ್ಟಿಯಲ್ಲೂ ಮಹತ್ವದ ಹೆಜ್ಜೆಗಳನ್ನು ಇರಿಸಬೇಕಿದೆ. ಮತ್ತೊಂದು ಮಹತ್ವದ ನಿರ್ಧಾರ ನನೆಗುದಿಗೆ ಬಿದ್ದಿದೆ. ರಾಜ್ಯಗಳಿಗೆ ಜಿಎಸ್​ಟಿ ಪರಿಹಾರವನ್ನು 2022ರ ಜೂನ್ ನಂತರವೂ ಮುಂದುವರಿಸುವ ಕುರಿತಂತೆ ಇನ್ನೂ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ. ಹಾಗಾಗಿ, ಹೊಸ ಆದಾಯಮೂಲವನ್ನು ಕಂಡುಕೊಳ್ಳುವ ಒತ್ತಡವೂ ರಾಜ್ಯಗಳ ಮೇಲೆ ಸೃಷ್ಟಿಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net