ಅಧಿಕಾರಕ್ಕೆ ಬಂದ ಕೂಡಲೇ ಬದಲಾದವರು ನವರಂಗಿಗಳು

Ashwath Narayan DKS
Published on

ಬೆಂಗಳೂರು: ರಾಜ್ಯದ ಜನರ ಬಳಿ ಅಂಗಾಲಾಚಿ, ಭಿಕ್ಷೆ ಬೇಡಿ ಅಧಿಕಾರ ಬಂದರು. ತಕ್ಷಣವೇ ಎಲ್ಲರಿಗೂ ಕಿರುಕುಳ ನೀಡಲಾರಂಭಿಸಿದ್ದಾರೆ. ಆಡಳಿತದ ಚುಕ್ಕಾಣಿ ಹಿಡಿದ ನಂತರ ಬದಲಾದವರು ನಿಜವಾದ ನವರಂಗಿಗಳು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿರುಗೇಟು ನೀಡಿದರು.

ನವರಂಗಿ ನಾರಾಯಣ ಎಂದ ಡಿಕೆಶಿಗೆ ಪ್ರತ್ಯುತ್ತರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಿಷನ್ ಕೇಳಿದ್ದರ ಬಗ್ಗೆ ಗುತ್ತಿಗೆದಾರರ ಆರೋಪಿಸಿದ್ದಾರೆ. ಸಚಿವರ ಕಾರ್ಯವೈಖರಿ ಬಗ್ಗೆ ಸ್ವಪಕ್ಷದ ಶಾಸಕರು ಅಸಮಾಧಾನಗೊಂಡು ಪತ್ರ ಬರೆದಿದ್ದಾರೆ.

ವರ್ಗಾವಣೆಗೆ ಲಂಚದ ಬೇಡಿಕೆಯಿಟ್ಟಿದ್ದಾರೆ ಎಂದು ಕೃಷಿ ಸಚಿವರ ವಿರುದ್ಧ ಇಲಾಖೆ ಅಧಿಕಾರಿಗಳು ದೂರು ನೀಡಿದ್ದಾರೆ. ಭ್ರಷ್ಟಾಚಾರದ ಆರೋಪ ಮುಚ್ಚಿ ಹಾಕಲು ಪತ್ರ ನಕಲಿ, ಗುತ್ತಿಗೆದಾರರ ಹೇಳಿಕೆ ಹಿಂದೆ ಬೇರೆ ಯಾರೋ ಇದ್ದಾರೆ ಎನ್ನುವ ಮೂಲಕ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರ ಮುಕ್ತ, ಪಾರದರ್ಶಕ, ಸ್ವಚ್ಛ ಆಡಳಿತ ನಡೆಸುತ್ತೇವೆ ಎಂದು ಕಾಂಗ್ರೆಸ್ ಕೊಟ್ಟ ಮಾತಿನಂತೆ ಆರೋಪ ಹೊತ್ತ ಡಿ.ಕೆ.ಶಿವಕುಮಾರ್‌ರನ್ನು ಮೊದಲು ವಜಾಗೊಳಿಸಬೇಕು. ನೀವು ಬೇಕಾದ್ದು ಹೇಳಿ ನಾವು ಮಾಡುವುದನ್ನು ಮಾಡುತ್ತೇವೆ ಎಂಬ ಭಂಡತನ ಡಿ.ಕೆ.ಶಿವಕುಮಾರ್ ಪ್ರದರ್ಶಿಸುತ್ತಿದ್ದಾರೆ.

ಬೇರೆಯವರ ಬಗ್ಗೆ ಹಾಗೆ ಹೀಗೆ ಎಂದು ಹೇಳುವ ಮೊದಲು ಡಿ.ಕೆ.ಶಿವಕುಮಾರ್ ಹೇಗೆ ಎಂಬುದು ನೋಡಿಕೊಳ್ಳಬೇಕು. ರಾಗಿ, ಕಬ್ಬಿನಿಂದ ಬಂಗಾರ ತೆಗೆಯುವುದು ಹೇಗೆ ? ಎಂದು ಹೇಳಿಕೊಡಲು ಪ್ರತ್ಯೇಕ ಯೂನಿವರ್ಸಿಟಿ ತೆರೆಯಲಿ. ರಾಮನಗರ ಜಿಲ್ಲೆಯನ್ನು ಯಾವ ರೀತಿ ಇಟ್ಟಿದ್ದಾರೆ ಎಂಬುದು ಗಮನಿಸಿದರೆ ಅಭಿವೃದ್ಧಿ ಬಗೆಗಿನ ಅವರ ಕಾಳಜಿ ಎಷ್ಟು ? ಎನ್ನುವುದು ತಿಳಿಯುತ್ತದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net