ಸಾಧಿಸಿದ ಬಳಿಕ ಮೂಕನಾಗಬೇಕು

ವಿಜಯವಾಣಿ
Published on

ದೇವರು ನಮಗೆ ಅಮೂಲ್ಯ ಜೀವನ ಕೊಟ್ಟಿದ್ದಾನೆ. ಆ ಜೀವನವನ್ನು ಒಳ್ಳೆಯದನ್ನಾಗಿ ಅಥವಾ ಕೆಟ್ಟದ್ದನ್ನಾಗಲಿ ಮಾಡಿಕೊಳ್ಳುವುದು ಅವರವರಿಗೆ ಬಿಟ್ಟಿದ್ದು. ಹಂಗಿಸಿ, ನಿಂದಿಸಿ ಮಾಡುವ ನೂರು ಕೆಲಸಗಳಿಗಿಂತ ವಂದಿಸಿ ಪ್ರೀತಿಸಿ ಮಾಡುವ ಒಂದು ಕೆಲಸ ಮೇಲು. ಎಲ್ಲರೂ ಕೈಬಿಟ್ಟರೂ ಕಲಿತ ವಿದ್ಯೆ ಮತ್ತು ಕಲಿತ ದುಡಿಮೆ ಎಂದೂ ಕೈ ಬಿಡುವುದಿಲ್ಲ. ರೈತ ಮತ್ತು ಶಿಕ್ಷಕ ಇಬ್ಬರೂ ಬದುಕಿನ ಎರಡು ಕಣ್ಣು. ಅನ್ನಕ್ಕೆ ರೈತ ಮತ್ತು ಜ್ಞಾನಕ್ಕೆ ಶಿಕ್ಷಕ ಬೇಕು.

ಯಶಸ್ವಿ ಮನುಷ್ಯನಾಗುವುದಕ್ಕಿಂತ ಮೌಲ್ಯಯುತ ವ್ಯಕ್ತಿಯಾಗಿ ಬಾಳಲು ಪ್ರಯತ್ನಿಸಬೇಕು. ನಮ್ಮ ವಿಚಾರಗಳನ್ನು ಎತ್ತರಿಸಬೇಕೇ ಹೊರತು ದನಿಯನ್ನಲ್ಲ. ಏಕೆಂದರೆ ಮಳೆ ನೀರಿನಿಂದ ಮರಗಳು ಬೆಳೆಯುತ್ತವೆ ಹೊರತು ಗುಡುಗು ಸಿಡಿಲಿನಿಂದಲ್ಲ. ಅಮೂಲ್ಯ ವಸ್ತುವಿಗಾಗಿ ಹುಡುಕಾಟ ಬೇಡ. ಏಕೆಂದರೆ ನಮಗಿಂತ ಅಮೂಲ್ಯವಾದುದು ಈ ಜಗತ್ತಿನಲ್ಲಿ ಬೇರಾವುದೂ ಇಲ್ಲ. ಇದ್ದರೆ ಸೂರ್ಯನ ಹಾಗೆ ಇರಬೇಕು. ಸೂರ್ಯ ಉದಯಿಸುವಾಗ ಗರ್ವ ಇಲ್ಲ.

ಮುಳುಗುವಾಗ ದುಃಖ ಇಲ್ಲ. ನಗು ಸ್ನೇಹವನ್ನು ಬೆಳೆಸುತ್ತದೆ. ಒಳ್ಳೆಯ ಮಾತು ದ್ವೇಷ ಕಳೆಯುತ್ತದೆ. ಒಳ್ಳೆಯ ಮನಸ್ಸು ಸಂಬಂಧಗಳನ್ನು ಕಾಪಾಡುತ್ತದೆ. ಒಳ್ಳೆಯ ವ್ಯಕ್ತಿತ್ವ ಜೀವನವನ್ನೇ ಬದಲಾಯಿಸುತ್ತದೆ. ಮಾತು ಕೀಲಿಕೈ ಇದ್ದಂತೆ. ಸರಿಯಾಗಿ ಬಳಸಿದರೆ ಯಾರ ಹೃದಯವನ್ನೂ ತೆರೆಯಬಹುದು. ವಾದಿಸಿ ಫಲವಿಲ್ಲ ಎಂದು ತಿಳಿದಾಗ ಮೌನವಾಗಿರುವುದು ಒಳ್ಳೆಯದು. ಯಾಕೆಂದರೆ ಮೌನ ಸಾವಿರ ಪ್ರಶ್ನೆಗಳಿಗೆ ಉತ್ತರ ನೀಡುವುದು.

ಜೀವನದಲ್ಲಿ ಎಲ್ಲವನ್ನು ಶಾಶ್ವತವಾಗಿ ಪಡೆಯಲು ಬಯಸುತ್ತೇವೆ. ಆದರೆ ಜೀವನವೇ ಶಾಶ್ವತವಲ್ಲ ಎಂಬುದನ್ನು ಮರೆಯುತ್ತೇವೆ.ಒಳ್ಳೆಯ ಹೃದಯವನ್ನು ಕಾಣಬೇಕಾದರೆ ಮನಸ್ಸು ವಿಶಾಲವಾಗಿರಬೇಕು. ಬೆವರ ಹನಿ ಭರವಸೆ ಕೊಡುತ್ತದೆ. ಕಣ್ಣೀರ ಹನಿ ಬದುಕನ್ನು ಕಲಿಸುತ್ತದೆ. ಸಾಧಿಸುವ ತನಕ ಕಿವುಡನಾಗಬೇಕು. ಸಾಧಿಸಿದ ಬಳಿಕ ಮೂಕನಾಗಬೇಕು. ವಿನಯವಿಲ್ಲದ ವಿದ್ಯೆ, ಹಸಿವಿಲ್ಲದ ಊಟ, ಹರಿತವಿಲ್ಲದ ಆಯುಧ, ಉಪಕಾರವಿಲ್ಲದ ಜೀವನ, ಗುಣವಿಲ್ಲದ ರೂಪ, ಉಪಯೋಗಕ್ಕೆ ಬಾರದ ಹಣ ವ್ಯರ್ಥವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ‘ಸಿದ್ಧಾಂತ ಶಿಖಾಮಣಿ’ಯಲ್ಲಿ ನಿರೂಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net