

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿರುವ ಹಿನ್ನೆಲೆ ದೇಶದ ಹಲವು ಪ್ರದೇಶಗಳಲ್ಲಿ ನಡೆಸಲಾಗುತ್ತಿದ್ದ ಸಿದ್ಧತೆಗಳು ಭಾರೀ ಪ್ರಮಾಣದ ಚರ್ಚೆಗೆ ಕಾರಣವಾಗಿತ್ತು. ತಾಜ್ ಮಹಲ್ನ್ನು ನೀರಿನಿಂದ ತೊಳೆಯುತ್ತಿದ್ದ ವಿಡಿಯೋವೊಂದನ್ನು ಪಾಕಿಸ್ತಾನಿ ಟ್ರೋಲಿಗರು ಟ್ವಿಟ್ಟರ್ನಲ್ಲಿ ಹಾಕಿ ಬಿಜೆಪಿ ಸರ್ಕಾರಕ್ಕೆ ಗೇಲಿ ಮಾಡಿದ್ದರು. ಅದಕ್ಕೆ ಉತ್ತರಿಸಿರುವ ಪಾಕ್ ಮೂಲದ ಭಾರತೀಯ ಗಾಯಕ ಅದ್ನಾನ್ ಸಾಮಿ, ವಿಡಿಯೋದಲ್ಲಿರುವುದು ತಾಜ್ಮಹಲ್ ಅಲ್ಲ ಎನ್ನುವ ಸತ್ಯವನ್ನು ಬಿಚ್ಚಿಡುವುದರ ಮೂಲಕ ಟ್ರೋಲಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪಾಕಿಸ್ತಾನಿ ಟ್ರೋಲಿಗ ಟ್ರೋಲ್ ಮಾಡಿರುವ ವಿಡಿಯೋವನ್ನು ಶೇರ್ ಮಾಡಿರುವ ಅದ್ನಾನಿ ಸಾಮಿ, "ಮೊದಲು ನಿಮ್ಮ ಮೆದುಳನ್ನು ಮತ್ತು ನಿಯತ್ತನ್ನು ಸ್ವಚ್ಛಗೊಳಿಸಿಕೊಳ್ಳಿ. ಎರಡನೆಯದಾಗಿ ತಾಜ್ಮಹಲ್ನ್ನು ಸ್ವಚ್ಛಗೊಳಿಸಲು ನಮ್ಮ ಬಳಿ ತಾಜ್ಮಹಲ್ ಇರಬೇಕು. ನಿಮ್ಮ ಬಳಿ ತಾಜ್ಮಹಲ್ ಇಲ್ಲ. ಮೂರನೆಯದಾಗಿ ಇದು ತಾಜ್ಮಹಲ್ ಅಲ್ಲವೇ ಅಲ್ಲ, ಬದಲಾಗಿ ಭೋಪಾಲ್ನಲ್ಲಿರುವ ತಾಜ್ಮಹಲ್ನ ಪ್ರತಿಕೃತಿ. ನಕಲು ಮಾಡುತ್ತಿರುವ ನಿಮ್ಮನ್ನು ನೋಡಿದರೆ ನನಗೆ ನಿಮ್ಮ ಉತ್ಸುಕತೆ ಅರ್ಥವಾಗುತ್ತದೆ. ನಿಮ್ಮ ಸೀಮಿತ ವ್ಯಾಪ್ತಿಯು ಈ ಉತ್ಸುಕತೆಯನ್ನು ನಿಯಂತ್ರಿಸಲು ಬಿಡುವುದಿಲ್ಲ ಎನ್ನುವುದು ನನಗೆ ಗೊತ್ತು." ಎಂದು ಟ್ವೀಟ್ ಮಾಡಿದ್ದಾರೆ.
ಆಫ್ತಾಬ್ ಹಸನ್ ಹೆಸರಿನ ಪಾಕಿಸ್ತಾನಿ ವ್ಯಕ್ತಿ ಭೋಪಾಲ್ನಲ್ಲಿರುವ ತಾಜ್ಮಹಲ್ನ ಪ್ರತಿಕೃತಿಯನ್ನು ನೀರಿನಲ್ಲಿ ತೊಳೆಯುತ್ತಿರುವ ವಿಡಿಯೋ ಹಾಕಿ, ಡೊನಾಲ್ಡ್ ಟ್ರಂಪ್ಗೆ ತಾಜ್ಮಹಲ್ನ್ನು ತೋರಿಸಲು ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ಮುಸ್ಲಿಮರನ್ನು ಭಾರತದ ಎರಡನೆಯ ದರ್ಜೆಯ ಪ್ರಜೆಗಳು ಎಂದು ಪರಿಗಣಿಸಿರುವ ಉಗ್ರರ ರಾಜ ಮೋದಿ ಮತ್ತು ಷಾ ಅವರಿಗೆ ತಾಜ್ಮಹಲ್ನ್ನು ನಿರ್ಮಿಸಿರುವುದು ಮುಸ್ಲಿಮರು ಎನ್ನುವುದು ಗೊತ್ತಿದೆ ಎಂದು ಟ್ವೀಟ್ ಮಾಡಿದ್ದ. (ಏಜೆನ್ಸೀಸ್)