ಮುರಿದು ಹೋದ ಹಲ್ಲಿನಿಂದ ಪತ್ತೆಯಾದ ಅಣ್ಣ! 18 ವರ್ಷಗಳ ಬಳಿಕ ಒಂದಾಯ್ತು ರಕ್ತಸಂಬಂಧ

Untitled design - 2024-06-28T204244.299
Published on

ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎಲ್ಲರನ್ನೂ ಆವರಿಸಿಕೊಂಡಿದ್ದು, ಒಂದಲ್ಲ ಒಂದು ವಿಷಯಗಳು ನೆಟ್ಟಿಗರ ಗಮನಸೆಳೆಯುತ್ತಲೇ ಇರುತ್ತದೆ. ಕೆಲವು ಆಘಾತ ಉಂಟುಮಾಡಿದರೆ, ಇನ್ನೂ ಕೆಲವು ಅಚ್ಚರಿ ಮೂಡಿಸುತ್ತದೆ. ಸಾವಿರಾರು ವಿಡಿಯೋಗಳ ಪೈಕಿ ಇಲ್ಲೊಂದು ದೃಶ್ಯ ನೋಡುಗರನ್ನು ಒಂದು ನಿಮಿಷ ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಹೌದು, ಒಂದು ಸಣ್ಣ ರೀಲ್ಸ್​ 18 ವರ್ಷದಿಂದ ಪರಸ್ಪರ ಮುಖನೋಡದ, ಭೇಟಿಯಾಗದ ಅಣ್ಣ-ತಂಗಿಯನ್ನು ಸೇರಿಸಿದೆ ಎಂದರೆ ನಂಬ್ತೀರಾ? ನಂಬಲೇಬೇಕು ಯಾಕಂದ್ರೆ ಇದು ಸತ್ಯ.

ಉತ್ತರ ಪ್ರದೇಶದ ಕಾನ್ಪುರದ ಯುವತಿಯೊಬ್ಬಳು ಕಳೆದ 18 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಮುಂಬೈಗೆ ಹೋದ ತನ್ನ ಅಣ್ಣ, ಮತ್ತೆ ಮನೆಗೆ ವಾಪಾಸ್ ಬಾರದೆ ಇದ್ದದ್ದನ್ನು ಕಂಡು ಬಹಳ ದುಃಖಿತಳಾಗಿದ್ದಳು. ಆತನ ಸ್ನೇಹಿತರೆಲ್ಲರೂ ಊರಿಗೆ ಆಗಾಗ್ಗೆ ಬಂದು ತಮ್ಮ ತಮ್ಮ ಮನೆಯವರನ್ನು ಭೇಟಿಯಾಗಿ, ಕೆಲಸಕ್ಕೆ ಹಿಂತಿರುಗಿದರೆ, ಈತ ಮಾತ್ರ ತನ್ನ ಕುಟುಂಬಸ್ಥರನ್ನು ಕಾಣಲು ಒಂದೇ ಒಂದು ದಿನ ಕೂಡ ಬರಲಿಲ್ಲ. ಆದರೆ, ಕಳೆದ ಕೆಲವು ದಿನಗಳ ಹಿಂದೆ ಆತ ಮಾಡಿದ ಒಂದು ರೀಲ್​ ನೋಡಿದ ತಂಗಿ, ಇವನು ನನ್ನ ಅಣ್ಣನೇ ಎಂಬುದನ್ನು ಒಂದೇ ಒಂದು ಗುರುತಿನಿಂದ ಪತ್ತೆಹಚ್ಚಿದ್ದಾಳೆ.

ಇನ್‌ಸ್ಟಾಗ್ರಾಮ್ ರೀಲ್ ನೋಡುತ್ತಿದ್ದ ಯುವತಿ, ತನ್ನ ಅಣ್ಣನ ಮುಖ ಹೋಲುವ ವ್ಯಕ್ತಿಯನ್ನು ವಿಡಿಯೋದಲ್ಲಿ ನೋಡಿ ಆಶ್ಚರ್ಯಕ್ಕೆ ಒಳಗಾಗಿದ್ದಾಳೆ. ಆದರೆ, ಇವನು ನನ್ನ ಅಣ್ಣನೇ ಎಂಬುದು ಆಕೆಗೆ ಮೊದಲಿಗೆ ಸ್ಪಷ್ಟವಾಗಿಲ್ಲ. ಬಳಿಕ ವೀಡಿಯೊದಲ್ಲಿ ಸಹೋದರನ ಮುರಿದ ಹಲ್ಲು ಗುರುತಿಸಿದ ಸಹೋದರಿ, ಈತ ನನ್ನ ಅಣ್ಣ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಖುಷಿಯಿಂದ ಕುಣಿದಾಡಿ, ಅವನನ್ನು ಸಂದೇಶದ ಮೂಲಕ ತಲುಪಿದ್ದಾಳೆ.

ಯುವತಿಯನ್ನು ಹಾಥಿಪುರ ಗ್ರಾಮದ ರಾಜಕುಮಾರಿ ಎನ್ನಲಾಗಿದ್ದು, ಮೊಬೈಲ್​ನಲ್ಲಿ ಇನ್​​ಸ್ಟಾಗ್ರಾಮ್ ರೀಲ್ಸ್ ನೋಡುವಾಗ ಸಹೋದರನನ್ನು ಪತ್ತೆಹಚ್ಚಿದ್ದಾಳೆ. ಆಕೆಯ ಅಣ್ಣ ಬಾಲ್ ಗೋವಿಂದನನ್ನು ಕಡೆಗೂ ಮನೆಗೆ ಕರೆಸಿಕೊಂಡ ಕುಟುಂಬಸ್ಥರು, ಮನೆ ಮಗನಿಗೆ ಆರತಿ ಮಾಡಿ, ಸಿಹಿ ತಿನ್ನಿಸಿ, ಸಂತಸದಿಂದ ಕಂಬನಿ ಮಿಡಿದಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net