ಗಗನ ಸಖಿಯರ ಜತೆ ಅಸಭ್ಯವಾಗಿ ವರ್ತಿಸಿದ್ದ ವಿದೇಶಿ ಪ್ರಜೆ ಬಂಧನ

Crime ( Arrest)
Published on

ಬೆಂಗಳೂರು: ಇಬ್ಬರು ಗಗನ ಸಖಿಯರ ಜತೆಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ.
ಮಾಲ್ಡೀವ್ಸ್ ಮೂಲದ ಅಕ್ರಂ ಮಹಮದ್(೫೧) ಬಂಧಿತ ಆರೋಪಿ. ಆ.೧೮ರಂದು ವಿಮಾನ ಹಾರಾಟ ವೇಳೆ ಈ ಘಟನೆ ನಡೆದಿತ್ತು. ಖಾಸಗಿ ವಿಮಾನಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಯು ಆ.೧೮ರಂದು ಮಾಲ್ಡೀವ್ಸ್‌ನ ಮಾಲೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ್ದ. ಪ್ರಯಾಣದ ವೇಳೆ ವಿಮಾನದಲ್ಲಿ ಗಗನಸಖಿಯನ್ನು ಕರೆದು ಬಿಯರ್ ಮತ್ತು ಗೋಡಂಬಿ ಕೇಳಿದ್ದಾನೆ. ಅದರಂತೆ ಆ ಗಗನಸಖಿ ಬಿಯರ್ ಮತ್ತು ಗೋಡಂಬಿ ತಂದು ಕೊಟ್ಟಿದ್ದಾರೆ. ಆಗ ಆರೋಪಿಯು ‘ನಾನು ನಿನ್ನಂತಹ ಹುಡುಗಿಯನ್ನು ಹುಡುಕುತ್ತಿದ್ದೆ. ನೀನು ಸೇವೆಗೆ ಎಷ್ಟು ಶುಲ್ಕ ಕೇಳುವೆ. ಯಾವಾಗ ನೀನು ಬಿಡುವಾಗುವೆ’ ಎಂದು ಕೇಳಿದ್ದಾನೆ. ಅಲ್ಲದೇ ‘ನಿನ್ನಂತಹ ಹುಡುಗಿಯನ್ನು ನಾನು ಕಳೆದ ೫೧ ವರ್ಷದಿಂದ ಹುಡುಕುತ್ತಿದ್ದೆ. ೧೦ ಡಾಲರ್ ಬದಲು ೧೦೦ ಡಾಲರ್ ನೀಡುತ್ತೇನೆ. ಉಳಿದ ಹಣವನ್ನು ನಿನ್ನ ಬಳಿಯೇ ಇರಿಸಿಕೋ’ ಎಂದು ಗಗನಸಖಿಯ ದೇಹವನ್ನು ಕೈನಿಂದ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.
ನನಗೆ ಒರಟು ವಸ್ತುಗಳೆಂದರೆ ಪ್ರೀತಿ:
ಮತ್ತೊಬ್ಬಳು ಗಗನಸಖಿ ಬಿಯರ್ ಮತ್ತು ಗೋಡಂಬಿಯ ಹಣ ಕೇಳಲು ಬಂದಾಗ, ಆರೋಪಿ ಪ್ಯಾಂಟಿನೊಳಗೆ ಕೈ ಹಾಕಿ ಹಣ ಹುಡುವಂತೆ ನಟಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ವಿಮಾನ ಲ್ಯಾಂಡ್ ಆಗುವಾಗ ಎರಡು ಬಾರಿ ತನ್ನ ಆಸನದಿಂದ ಮೇಲೆ ಎದ್ದಿದ್ದಾನೆ. ಈ ವೇಳೆ ಕುಳಿತು ಕೊಳ್ಳುವಂತೆ ಗಗನ ಸಖಿ ಹೇಳಿದಾಗ, ಆರೋಪಿಯು ‘ನನಗೆ ಒರಟು ವಸ್ತುಗಳೆಂದರೆ ಪ್ರೀತಿ. (ಐ ಲವ್ ರಫ್ ಥಿಂಗ್ಸ್) ನೀನು ತುಂಬಾ ಒರಟು’ ಎಂದು ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ.
ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ನೊಂದ ಗಗನ ಸಖಿಯರು ಪ್ರಯಾಣಿಕನ ವರ್ತನೆ ಹಾಗೂ ಕಿರುಕುಳದ ಬಗ್ಗೆ ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ವೇಳೆ ವಿಮಾನಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿ ಆರೋಪಿ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅಕ್ರಂ ಮಾಲ್ಡೀವ್ಸ್‌ನಿಂದ ಭಾರತಕ್ಕೆ ಬಿಜಿನೆಸ್ ವೀಸಾದಡಿ ಬಂದಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net