

ಆಂತರಿಕ ಕ್ಷೋಭೆಗಳಿಂದ ಬಸವಳಿದಿರುವ ಅಫ್ಘಾನಿಸ್ತಾನದಲ್ಲಿ ಶಾಂತಿಯನ್ನು ಸ್ಥಾಪಿಸುವ ಉದ್ದೇಶದಿಂದ ಅಮೆರಿಕ ಮತ್ತು ತಾಲಿಬಾನ್ ಉಗ್ರ ಸಂಘಟನೆಗಳ ನಡುವೆ ಮೊನ್ನೆ ಏರ್ಪಟ್ಟ ಒಪ್ಪಂದ ಅನೇಕ ದೃಷ್ಟಿಗಳಿಂದ ಗಮನಾರ್ಹವಾದುದು. ಈ ಒಡಂಬಡಿಕೆ ಆ ದೇಶದಲ್ಲಿ ಬೀರಬಹುದಾದ ಪರಿಣಾಮ ಮತ್ತು ಭಾರತದ ಮೇಲೆ ಇದರಿಂದಾಗಬಹುದಾದ ಪರಿಣಾಮಗಳ ಬಗ್ಗೆಯೂ ಈಗ ಚರ್ಚೆ ನಡೆಯುತ್ತಿದೆ.
ಈ ನಡುವೆ, ಒಪ್ಪಂದದಲ್ಲಿ ಉಲ್ಲೇಖಿಸಿದ ಪ್ರಕಾರ, ಜೈಲುಗಳಲ್ಲಿರುವ 5 ಸಾವಿರ ತಾಲಿಬಾನ್ ಹೋರಾಟಗಾರರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಹೇಳಿರುವುದು ಒಪ್ಪಂದದ ನಿರುಮ್ಮಳ ಜಾರಿಗೆ ಆತಂಕವನ್ನೂ ತಂದಿದೆ. ಮಾರ್ಚ್ 10ರಿಂದ ಆಫ್ಘನ್ ಸರ್ಕಾರ ಮತ್ತು ತಾಲಿಬಾನಿಗಳ ನಡುವೆ ಮಾತುಕತೆ ಆರಂಭವಾಗಲಿದೆ. ಅಮೆರಿಕದ ಅವಳಿ ಕಟ್ಟಡಗಳ ಮೇಲೆ ಅಲ್ಖೆೈದಾ ಉಗ್ರರು ದಾಳಿಮಾಡಿ, ಆ ದೇಶಕ್ಕೆ ಭಾರಿ ಆಘಾತ ಉಂಟುಮಾಡಿದ್ದರು. ಇದರಿಂದ ಸಹಜವಾಗಿಯೇ ಕೆರಳಿದ ಅಮೆರಿಕವು ದಾಳಿ ಸಂಚುಕೋರ ಒಸಾಮಾ ಬಿನ್ ಲಾಡೆನ್ಗೆ ಆಶ್ರಯ ನೀಡಿದ ಅಫ್ಘಾನಿಸ್ತಾನದ ತಾಲಿಬಾನಿಗಳ ಮೇಲೆ ಆಕ್ರಮಣ ಆರಂಭಿಸಿತು. ಕೆಲ ವರ್ಷಗಳ ನಂತರ ಲಾಡೆನ್ನನ್ನು ಪಾಕಿಸ್ತಾನದಲ್ಲಿ ಪತ್ತೆಹಚ್ಚಿ ಹೊಡೆದುರುಳಿಸುವಲ್ಲಿಯೂ ಅಮೆರಿಕ ಯಶಸ್ವಿಯಾಯಿತು. ಆದರೆ ಆಫ್ಘನ್ ಕಾರ್ಯಾಚರಣೆಗಳಿಂದಾಗಿ ಅಮೆರಿಕದ 2 ಸಾವಿರಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಆ ದೇಶ ಅಪಾರ ಪ್ರಮಾಣದ ಹಣವನ್ನೂ ವ್ಯಯಿಸಬೇಕಾಗಿ ಬಂದಿದೆ. ಹೀಗಾಗಿ ಅಲ್ಲಿಂದ ಅಮೆರಿಕ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಪ್ರಸ್ತುತ ಅಫ್ಘಾನಿಸ್ತಾನದಲ್ಲಿರುವ ನ್ಯಾಟೊ ಪಡೆಗಳಲ್ಲಿ ಅಮೆರಿಕದ ಸೈನಿಕರ ಸಂಖ್ಯೆಯೇ ಹೆಚ್ಚು. ಇನ್ನೊಂದೆಡೆ, ಒಂದು ಕಾಲದಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರಸೂತ್ರವನ್ನೂ ಹಿಡಿದಿದ್ದ ತಾಲಿಬಾನಿಗಳು ಸಹ ಈಗ ಬಸವಳಿದಿದ್ದಾರೆ. ಹೀಗಾಗಿ ಒಪ್ಪಂದಕ್ಕೆ ಒಪ್ಪಿದ್ದಾರೆ. ಇದರಿಂದ ಆ ದೇಶದಲ್ಲಿ ತಾಲಿವಾನ್ ಪ್ರಭಾವ ತಗ್ಗುವುದೋ ಅಥವಾ ಹೆಚ್ಚವುದೋ? ಅಲ್ಲಿನ ಆಡಳಿತದ ಮೇಲೆ ಆಗುವ ಪರಿಣಾಮ ಮುಂತಾದ ಚರ್ಚೆಗಳು ಗರಿಗೆದರಿವೆ. ಈ ಮಧ್ಯೆ, ಭಾರತಕ್ಕೆ ಕಳವಳ ತರುವ ಅಂಶವೂ ಇಲ್ಲಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಅಫ್ಘಾನಿಸ್ತಾನದಲ್ಲಿ ಭಾರತ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿದೆ ಎಂಬುದು ಒಂದಾದರೆ, ಮುಂದಿನ ದಿನಗಳಲ್ಲಿ ತಾಲಿಬಾನ್ ಉಗ್ರರು ಭಾರತದಲ್ಲಿ ಚಟುವಟಿಕೆ ನಡೆಸಬಹುದೇ ಎಂಬುದು ಮತ್ತೊಂದು. ಹಾಗೇನಾದರೂ ಆದಲ್ಲಿ ಭಾರತಕ್ಕೆ ಮತ್ತಷ್ಟು ಭದ್ರತಾ ತಲೆನೋವು ಗ್ಯಾರಂಟಿ. ಪಾಕಿಸ್ತಾನ ಕೂಡ ಈ ಸನ್ನಿವೇಶ ಬಳಸಿಕೊಳ್ಳಲು ಮುಂದಾದರೆ ಅಚ್ಚರಿ ಇಲ್ಲ. ಕಾಶ್ಮೀರದಲ್ಲಿನ ಪರಿಸ್ಥಿತಿ ಒಂದು ಹದಕ್ಕೆ ಬರುತ್ತಿದೆ ಎಂಬಂತಿರುವಾಗ, ತಾಲಿಬಾನ್ ಉಗ್ರರ ಉಪಟಳ ಶುರುವಾಗದಂತೆ ಸರ್ಕಾರ ಕಟ್ಟೆಚ್ಚರ ವಹಿಸಬೇಕಿದೆ.
ತಾಲಿಬಾನ್ ಸಂಘಟನೆಯ ಸುಮಾರು 5 ಸಾವಿರ ಮಂದಿ ಅಲ್ಲಿನ ಜೈಲುಗಳಲ್ಲಿದ್ದು, ಅವರ ಬಿಡುಗಡೆಗೆ ಪ್ರತಿಯಾಗಿ ತಾಲಿಬಾನ್ ವಶದಲ್ಲಿರುವ ಆಫ್ಘನ್ ಸರ್ಕಾರದ 1 ಸಾವಿರ ಬಂದಿಗಳನ್ನು ಬಿಡುಡೆ ಮಾಡಬೇಕೆಂಬುದು ಒಪ್ಪಂದದಲ್ಲಿರುವ ಒಂದು ಮುಖ್ಯ ಅಂಶ. ಆದರೆ, ‘ಈ ಅಂಶ ನಿರ್ಧರಿಸುವ ಅಧಿಕಾರ ಅಮೆರಿಕಕ್ಕಿಲ್ಲ. ಅದು ಏನಿದ್ದರೂ ಮಧ್ಯವರ್ತಿ ಮಾತ್ರ’ ಎಂದು ಹೇಳುವ ಮೂಲಕ ಅಧ್ಯಕ್ಷ ಘನಿ ಆಕ್ಷೇಪ ಹೊರಹಾಕಿದ್ದಾರೆ. ಈ ಅಸಮಾಧಾನ ಒಪ್ಪಂದದ ಮೇಲೆ ಯಾವ ರೀತಿಯ ಪರಿಣಾಮ ಉಂಟುಮಾಡುತ್ತದೆಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಇದೇನೇ ಇದ್ದರೂ, ಈ ಒಪ್ಪಂದ ಏಷ್ಯಾ ವಲಯದಲ್ಲಿ ಶಾಂತಿಗೆ ಕಾರಣವಾಗಬೇಕೆ ವಿನಾ ಅಶಾಂತಿಯನ್ನು ಹೆಚ್ಚಿಸಬಾರದಷ್ಟೆ.