

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭಗೊಂಡು (2021 ಆಗಸ್ಟ್ 15) ಈಗಾಗಲೇ ಎರಡು ವರ್ಷಕ್ಕೂ ಹೆಚ್ಚು ಅವಧಿ ಕಳೆದಿದೆ. ತನ್ನ ಉದ್ದೇಶ ಈಡೇರಿದ ಮೇಲೆ ಅಮೆರಿಕ ಅಫ್ಘಾನಿಸ್ತಾನವನ್ನು ದಯನೀಯ ಸ್ಥಿತಿಯಲ್ಲಿ ಬಿಟ್ಟುಹೋಯಿತು. ತಾಲಿಬಾನಿಗಳು ಬಂದ ಮೇಲಂತೂ ಅಪ್ಘಾನ್ ಮತ್ತೆ ನರಕದತ್ತ ಮುಖ ಮಾಡಿದೆ. ಅಲ್ಪಸಂಖ್ಯಾತರು ದೊಡ್ಡ ಸಂಖ್ಯೆಯಲ್ಲಿ ದೇಶವನ್ನು ತೊರೆದಿದ್ದರೆ, ಮಹಿಳೆಯರು ಮನೆಗೆ ಸೀಮಿತವಾಗಿ ಉಳಿದಿದ್ದಾರೆ. ಬಡತನ, ಹಸಿವು ತಾಂಡವವಾಡುತ್ತಿದೆ. ಐವತ್ತು ವರ್ಷಗಳ ಹಿಂದೆಯೇ ಆಧುನಿಕತೆಯತ್ತ ಅಡಿಯಿಟ್ಟಿದ್ದ ಅಪ್ಘಾನ್ ಈಗ ಹಿಂದಡಿ ಇಡುತ್ತಿರುವುದು ದುರಂತ.
ಬಾಲಕಿಯರ ಶಿಕ್ಷಣ, ಮಹಿಳೆಯರ ಉದ್ಯೋಗವನ್ನು ವಿರೋಧಿಸುವ ತಾಲಿಬಾನ್, ಪ್ರಸ್ತುತ ಮಹಿಳೆಯರ ಎಲ್ಲ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ. ಪೊಲೀಸ್ ಇಲಾಖೆಯಲ್ಲಿದ್ದ ಎಲ್ಲ ಮಹಿಳೆಯರನ್ನು ಉದ್ಯೋಗದಿಂದ ಬಿಡುಗಡೆಗೊಳಿಸಿ, ಮನೆಗೆ ಕಳುಹಿಸಲಾಗಿದೆ. ಕೆಲ ಮಹಿಳಾ ಪೊಲೀಸ್ ಪೇದೆಗಳಂತೂ, ತಾಲಿಬಾನಿಗಳ ಭಯದಿಂದ ಪೊಲೀಸ್ ಸಮವಸ್ತ್ರವನ್ನೂ ಸುಟ್ಟುಹಾಕಿದ್ದಾರೆ. ಅಷ್ಟೇ ಅಲ್ಲ, ವೈದ್ಯಕೀಯ ವಿದ್ಯಾಭ್ಯಾಸ ಪೂರ್ಣಗೊಳಿಸಿ ದೊಡ್ಡ ಆಸ್ಪತ್ರೆಗಳಲ್ಲಿ ವೈದ್ಯರಾಗಿದ್ದ, ತಮ್ಮದೇ ಕ್ಲಿನಿಕ್ಗಳನ್ನು ನಡೆಸುತ್ತಿದ್ದ ಮಹಿಳೆಯರು ಈಗ ಉದ್ಯೋಗ ಕಳೆದುಕೊಂಡು ಮನೆಯಲ್ಲೇ ಇದ್ದಾರೆ. ಕುಟುಂಬ ನಿರ್ವಹಣೆಗಾಗಿ ಮನೆಯಲ್ಲೇ ಬುರ್ಖಾ ಹೊದ್ದಿಕೊಂಡು, ಹೊಲಿಗೆ ಮತ್ತು ಕಸೂತಿಯ ಕೆಲಸ ಮಾಡುತ್ತಿದ್ದಾರೆ. ‘ನಾವು ಇಂಥ ದಿನಗಳನ್ನು ನೋಡುತ್ತೇವೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ’ ಎಂದು ಹೇಳುವಾಗ ಅವರಿಂದ ಕಣ್ಣೀರು ಧಾರಾಕಾರವಾಗಿ ಹರಿಯುತ್ತದೆ.
ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪೂರೈಸಿ, ಒಳ್ಳೆಯ ಉದ್ಯೋಗದಲ್ಲಿದ್ದ ಮಹಿಳೆಯರು ಕೂಡ ಇಂದು ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದಾರೆ. ಕೆಲ ಮಹಿಳೆಯರು ಧೈರ್ಯ ಮಾಡಿ ತಾವು ಮಾಡುತ್ತಿದ್ದ ಉದ್ಯೋಗಕ್ಕೆ ಮರು ಸೇರ್ಪಡೆಯಾಗಿದ್ದರು. ಆದರೆ, ತಾಲಿಬಾನ್ ಆಡಳಿತ ಕೆಲವೇ ದಿನಗಳಲ್ಲಿ ಅಂಥ ಮಹಿಳೆಯರ ಶವಗಳನ್ನು ಅವರ ಮನೆಗೆ ಕಳುಹಿಸಲಾರಂಭಿಸಿತು. ಹೀಗಾಗಿ, ಈಗ ಭಯಭೀತರಾಗಿರುವ ಮಹಿಳೆಯರು ಮನೆಯಿಂದ ಆಚೆ ಬರುತ್ತಿಲ್ಲ. ಸದ್ಯ, ಪ್ರಾಣ ಉಳಿಸಿಕೊಳ್ಳುವುದೇ ಅವರ ಎದುರಿಗಿರುವ ದೊಡ್ಡ ಸವಾಲು. ತಾಲಿಬಾನ್ ಆಡಳಿತ ಆರಂಭವಾಗುತ್ತಿದ್ದಂತೆಯೇ ಈ ಮಹಿಳೆಯರ ಕನಸುಗಳೆಲ್ಲ ನುಚ್ಚುನೂರಾಗಿವೆ. 11 ಮತ್ತು 12ನೇ ತರಗತಿಯಲ್ಲಿ ಓದುತ್ತಿದ್ದ ಯುವತಿಯರಿಗೆ ಪರೀಕ್ಷೆಗೆ ಹಾಜರಾಗಲು ಬಿಟ್ಟಿಲ್ಲ. ಇದರಿಂದ, ಅರ್ಧದಲ್ಲೇ ಶಿಕ್ಷಣ ಮೊಟಕಾಗಿದೆ. ಆರನೇ ತರಗತಿಯವರೆಗೆ ಮಾತ್ರ ಶಾಲೆಗೆ ಬರಲು ಬಾಲಕಿಯರಿಗೆ ಅನುಮತಿ ನೀಡಿದೆ ತಾಲಿಬಾನ್ ಆಡಳಿತ. ಅದಕ್ಕಿಂತ ಹೆಚ್ಚಿನ ಶಿಕ್ಷಣ ಹೆಣ್ಣುಮಕ್ಕಳಿಗೆ ಅವಶ್ಯಕತೆಯಿಲ್ಲ ಎಂಬ ಮಾನಸಿಕತೆ ಅದರದ್ದು.
ಮುಕ್ತವಾಗಿ ಮಾತನಾಡುವಂತಿಲ್ಲ
ಯುವತಿಯರು ಕಾಲೇಜಿಗೆ ಹೋಗುವುದನ್ನು 2021ರ ಸೆಪ್ಟೆಂಬರ್ನಲ್ಲಿಯೇ ನಿಷೇಧಿಸಲಾಗಿದೆ. ಮಹಿಳೆಯರು ಮನೆಯಿಂದ ಒಂಟಿಯಾಗಿ ಹೊರಬರುವುದನ್ನು 2021ರ ಡಿಸೆಂಬರ್ನಲ್ಲಿ ನಿಷೇಧಿಸಲಾಗಿದೆ. 2022ರ ಮೇನಲ್ಲಿ ಮಹಿಳೆಯರಿಗೆ ಹೊಸ ವಸ್ತ್ರಸಂಹಿತೆ ಜಾರಿಗೆ ತರಲಾಗಿದ್ದು, ಕಾಲಿನಿಂದ ತಲೆಯವರೆಗೂ ದೇಹ ವಸ್ತ್ರದಿಂದ ಮುಚ್ಚಿರಬೇಕು ಎಂದು ಫರ್ವನು ಹೊರಡಿಸಿದೆ ತಾಲಿಬಾನ್ ಆಡಳಿತ. ಕಾಬೂಲ್ನಲ್ಲಿ ಮಹಿಳೆಯರಿಗಾಗಿಯೇ ನಿರ್ವಿುಸಿದ್ದ ಪಾರ್ಕ್ನ್ನು ಕೂಡ ತಾಲಿಬಾನ್ ಬಂದ್ ಮಾಡಿದೆ.
2023 ಜುಲೈನಲ್ಲಿ ಮಹಿಳೆಯರ ಬ್ಯೂಟಿಪಾರ್ಲರ್ಗಳನ್ನು ಕೂಡ ನಿಷೇಧಿಸಲಾಗಿದೆ. ಬ್ಯೂಟಿಪಾರ್ಲರ್ ನಡೆಸಿ ತಿಂಗಳಿಗೆ 12-15 ಸಾವಿರ ರೂ. ಸಂಪಾದಿಸುತ್ತಿದ್ದ ಮಹಿಳೆಯರು ಈಗ ಯಾವುದೇ ಆದಾಯವಿಲ್ಲದಿರುವುದರಿಂದ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಹಣಕಾಸಿನ ಬಿಕ್ಕಟ್ಟಿನಿಂದ ಗಂಡುಮಕ್ಕಳ ಶಿಕ್ಷಣ ಕೂಡ ಮೊಟಕುಗೊಂಡಿದೆ. ಅಷ್ಟೇ ಅಲ್ಲ, ಮನೆಗೇ ಸೀಮಿತಗೊಂಡಿರುವುದರಿಂದ ಮಹಿಳೆಯರು ಖಿನ್ನತೆ ಅನುಭವಿಸುತ್ತಿದ್ದಾರೆ. ದುರಂತವೆಂದರೆ, ಇದರಿಂದ ಹೊರಗೆ ಬರಲು 16 ವರ್ಷದ ಬಾಲಕಿಯರಿಂದ ಹಿಡಿದು 45-50 ವರ್ಷದ ಮಧ್ಯವಯಸ್ಕ ಮಹಿಳೆಯರು ಆಫೀಮಿನ ಚಟಕ್ಕೆ ದಾಸರಾಗಿದ್ದಾರೆ. ಮೊದಲೇ ಆರ್ಥಿಕ ಬಿಕ್ಕಟ್ಟು. ಅಫೀಮು ಖರೀದಿಗೆ ದುಡ್ಡು ಹೊಂದಿಸಲು ಕಾಬೂಲಿನ ಕೆಲ ಯುವತಿಯರು ದೇಹ ಮಾರಿಕೊಂಡಿದ್ದಾರೆ. ಅಫೀಮು ಸೇರಿದಂತೆ ಮಾದಕದ್ರವ್ಯದ ಚಟ ಬಿಡಿಸಲು ಕಾಬೂಲ್ನಲ್ಲಿ ಸರ್ಕಾರವೇ ಕೇಂದ್ರವೊಂದು ತೆಗೆದಿದ್ದು, ಇಲ್ಲಿ ಯುವಕ-ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರು ಯಾರೊಡನೆ ಮುಕ್ತವಾಗಿ ಮಾತನಾಡುವಂತಿಲ್ಲ, ಯಾರೊಡನೆ ಬೆರೆಯುವಂತಿಲ್ಲ, ಪಾರ್ಕ್ನಲ್ಲಿ ಮಕ್ಕಳನ್ನು ಆಟವಾಡಿಸುವಂತಿಲ್ಲ, ಆರನೇ ತರಗತಿ ಬಳಿಕ ಶಾಲೆಗೆ ಹೋಗುವಂತಿಲ್ಲ, ಎಷ್ಟೇ ಕಲಿತಿದ್ದರೂ, ನೌಕರಿಗೆ ಸೇರುವಂತಿಲ್ಲ... ಹೀಗೆ ಇಲ್ಲಗಳ ಲೋಕದಲ್ಲಿ ಮಹಿಳೆಯರು ಮೌನಕ್ಕೆ ಶರಣಾಗಿದ್ದು, ಆ ದುಃಖ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ದನಿ ಕಳೆದುಕೊಂಡ ಅಲ್ಪಸಂಖ್ಯಾತರು
ಹಿಂದೊಮ್ಮೆ ಅಫ್ಘಾನಿಸ್ತಾನವನ್ನು ಹಿಂದು ರಾಜರು ಆಳುತ್ತಿದ್ದರು. ಈಗ ಹಿಂದುಗಳಾಗಲಿ, ಸಿಕ್ಖ್ರಾಗಲ್ಲಿ ಇರಲು ಬಯಸುತ್ತಿಲ್ಲ. ಇದ್ದರೂ, ಪ್ರಾಣಕ್ಕೆ ಯಾವಾಗ ಸಂಚಕಾರ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಪ್ರತಿ ದಿನ, ಪ್ರತಿ ಕ್ಷಣ ಉಸಿರುಗಟ್ಟಿಸುವ ವಾತಾವರಣದಲ್ಲೇ ಬದುಕುವ ಅನಿವಾರ್ಯತೆ. ಎಷ್ಟೆಂದರೆ ವೇಷಭೂಷಣ ಸಹ ಇಸ್ಲಾಮಿಕ್ ರೀತಿಯಲ್ಲೇ. ಆಶ್ಚರ್ಯ ಎನಿಸಿದರೂ ವಾಸ್ತವ ಏನೆಂದರೆ, ಇಡೀ ಅಫ್ಘಾನಿಸ್ತಾನದಲ್ಲಿ ಈಗಿರುವ ಸಿಕ್ಖ್ರ ಸಂಖ್ಯೆ 50, ಹಿಂದುಗಳ ಸಂಖ್ಯೆ 20.
ಬಹುತೇಕ ಸಿಕ್ಖ್ ಪಲಾಯನಗೈದು, ಭಾರತ ಮತ್ತು ಕೆನೆಡಾದಲ್ಲಿ ಆಶ್ರಯ ಪಡೆದಿದ್ದಾರೆ. 1980ರ ದಶಕದಲ್ಲಿ 5 ಲಕ್ಷ ಸಿಕ್ ್ಖು ಅಫ್ಘಾನ್ನಲ್ಲಿದ್ದರು. ಆದರೆ, ಕಳೆದ ನಾಲ್ಕು ದಶಕಗಳಲ್ಲಿನ ನಿರಂತರ ಹಿಂಸೆಯು ಅವರನ್ನು ಇಲ್ಲಿಂದ ಪಲಾಯನಗೈಯ್ಯುವಂತೆ ಮಾಡಿದೆ. ರಾಜಧಾನಿ ಕಾಬೂಲ್ನಲ್ಲಿ ಎಂಟು ಗುರುದ್ವಾರಗಳಿವೆ. ಆದರೆ, ಕರ್ತೆ ಪರ್ವಾನ್ ಗುರುದ್ವಾರವೊಂದನ್ನು ಹೊರತುಪಡಿಸಿದರೆ, ಉಳಿದ ಏಳು ಗುರುದ್ವಾರಗಳು ಬಂದ್ ಆಗಿವೆ. ಕರ್ತೆ ಪರ್ವಾನ್ ಗುರುದ್ವಾರದ ಮೇಲೆ 2022ರಲ್ಲಿ ಭಯೋತ್ಪಾದಕ ದಾಳಿ ನಡೆದು, ಇಬ್ಬರು ಸಿಕ್ಖ್ ಪ್ರಾಣ ಕಳೆದುಕೊಂಡರು. ತಾಲಿಬಾನ್ ವಿರೋಧಿ ಗುಂಪಾಗಿರುವ ಇಸ್ಲಾಮಿಕ್ ಸ್ಟೇಟ್ ಖುರಾಸಾನ್ ಪ್ರಾಂತ (ಐಎಸ್ಕೆಪಿ) ಈ ದಾಳಿಯ ಹೊಣೆ ಹೊತ್ತಿಕೊಂಡಿತ್ತು. ಮೊದಲು ಈ ಗುರುದ್ವಾರಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದರು. ಆದರೆ, ಭಯೋತ್ಪಾದಕ ದಾಳಿಯ ಬಳಿಕ ಬೆರಳೆಣಿಕೆ ಸಂಖ್ಯೆಯಷ್ಟೇ ಭಕ್ತರು ಆಗಮಿಸುತ್ತಿದ್ದಾರೆ.
2021ರಲ್ಲಿ ತಾಲಿಬಾನ್ ಆಡಳಿತ ಆರಂಭವಾಗುವ ಮುಂಚೆ, ಕಾಬೂಲ್ ನಗರವೊಂದರಲ್ಲೇ ಏಳು ಸಾವಿರ ಹಿಂದೂಗಳಿದ್ದರು. ಈಗ ಅವರ ಸಂಖ್ಯೆ ಬರೀ 20. ಉಳಿದ ಪ್ರಾಂತ್ಯಗಳಲ್ಲಂತೂ ಹಿಂದೂ ಜನಸಂಖ್ಯೆ ಇಲ್ಲವೇ ಇಲ್ಲ. ಕಾಬೂಲ್ನ ಆಶಾಮಾಯಿ ಮಂದಿರಕ್ಕೆ ಮುಂಚೆ ನೂರಾರು ಭಕ್ತರು ಆಗಮಿಸುತ್ತಿದ್ದರು. ಆದರೆ, ಈಗ ಯಾರೂ ಬರುತ್ತಿಲ್ಲ. ಮಂಗಳವಾರ-ಶುಕ್ರವಾರ ದೇವಿಗೆ ವಿಶೇಷ ಪೂಜೆ ನೇರವೇರಿಸಿ, ನೈವೇದ್ಯ ನೀಡಲಾಗುತ್ತದೆ. ಆದರೆ, ಪ್ರಸಾದ ಸ್ವೀಕರಿಸಲು ಈಗ ಜನರೇ ಇಲ್ಲ ಎನ್ನುತ್ತಾರೆ ಮಂದಿರದ ಅರ್ಚಕರು. ಇದೇ ಮಂದಿರದಲ್ಲಿ ಜ್ಯೋತಿಯೊಂದು ಅಖಂಡವಾಗಿ ಬೆಳಗುತ್ತಿದ್ದು, 2500 ವರ್ಷಗಳಿಂದ ಇದೆ. ಇಲ್ಲಿನ ಹಿಂದುಗಳು ಭಾರತ, ಜರ್ಮನಿ, ಕೆನೆಡಾದಲ್ಲಿ ಆಶ್ರಯ ಪಡೆದಿದ್ದಾರೆ. ಕೆಲವರು ಮನೆಯನ್ನು ಮಾರಾಟ ಮಾಡಿ ಹೋಗಿದ್ದರೆ, ಮತ್ತೆ ಕೆಲವರು ತಾವು ವಾಸಿಸುತ್ತಿದ್ದ ನೆನಪಿನ ಕುರುಹು ಇರಲಿ ಎಂದು ಮನೆಯನ್ನು ಹಾಗೆಯೇ ಬಿಟ್ಟು ಹೋಗುತ್ತಿದ್ದಾರೆ. ಅಲ್ಲಿ ಈಗ ಯಾರೂ ವಾಸಿಸುತ್ತಿಲ್ಲ. ಉದ್ಯಮ ನಡೆಸುತ್ತಿದ್ದ ಕೆಲ ಹಿಂದುಗಳು ಮತ್ತು ಸಿಕ್ ್ಖು ಅದನ್ನು ಮುಸ್ಲಿಂರಿಗೆ ಒಪ್ಪಿಸಿಬಿಟ್ಟಿದ್ದಾರೆ ಇಲ್ಲವೆ ಮುಸ್ಲಿಂರೊಂದಿಗೆ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಕೆಲವೊಮ್ಮೆ ತಾಲಿಬಾನಿಗಳು ದಾಳಿ ನಡೆಸಿದರೆ, ಮತ್ತೆ ಕೆಲವೊಮ್ಮೆ ತಾಲಿಬಾನ್ ವಿರೋಧಿ ಗುಂಪುಗಳು ದಾಳಿ ನಡೆಸುತ್ತವೆ.
ಅದೊಂದು ಕಾಲವಿತ್ತು!
ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, ಅಫ್ಘಾನಿಸ್ತಾನದ ಮೇಲೆ 11ನೇ ಶತಮಾನದವರೆಗೆ ಹಿಂದು ರಾಜರ ಆಳ್ವಿಕೆ ಇರುವುದು ತಿಳಿಯುತ್ತದೆ. ಮಹಾಭಾರತ ಕಾಲದ ಗಾಂಧಾರಿ ಗಾಂಧಾರದ ರಾಜಕುಮಾರಿಯಾಗಿದ್ದಳು. ಶಕುನಿ ಗಾಂಧಾರದ ರಾಜಾ ಆಗಿದ್ದರು. ಕ್ರಿಸ್ತಪೂರ್ವ 195ರವರೆಗೆ ಮೌರ್ಯ ಸಾಮ್ರಾಜ್ಯದ ಆಡಳಿತವಿತ್ತು. ಆ ನಂತರ ಗಾಂಧಾರದ ಹೆಸರು ಕಂಧಾರ್ ಆಗಿ ಬದಲಾಯಿತು. ಇಸ್ವಿ 822ರಿಂದ 1026ರವರೆಗೆ ಹಿಂದು ರಾಜರು ಆಳ್ವಿಕೆ ನಡೆಸಿದ್ದರು. ಕಲ್ಲಾರ್ ಎಂಬ ದೊರೆ ದೀರ್ಘಾವಧಿ ಆಡಳಿತ ನಡೆಸಿದ್ದ. 1030ರ ನಂತರ ಹಿಂದುಗಳ ಆಳ್ವಿಕೆ ನಿಂತುಹೋಗಿದ್ದು ಮಾತ್ರವಲ್ಲ, ಹಿಂದುಗಳ ಸಂಖ್ಯೆಯೂ ಕ್ಷೀಣಿಸತೊಡಗಿತು. ಸಿಕ್ಖ್ ಮೊದಲ ಗುರು ಗುರುನಾನಕ್ ದೇವ್ 15ನೇ ಶತಮಾನದಲ್ಲಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಸಿಕ್ಖ್ ಇಲ್ಲಿ ನೆಲೆಸಲಾರಂಭಿಸಿದರು. 1970ರ ದಶಕದ ನಂತರ ಪಲಾಯನ ಹೆಚ್ಚಿತು. ಈಗ ಬರೀ ಇಪ್ಪತ್ತು ಹಿಂದುಗಳಿದ್ದಾರೆ. ಅವರು ಅವಕಾಶ ಸಿಗುತ್ತಿದ್ದಂತೆ, ಅಫ್ಘಾನ್ ತೊರೆಯಲು ಕಾತರರಾಗಿದ್ದಾರೆ.