ಸಂಪಾದಕೀಯ; ಪಾಕ್ ಪರ ವಕಾಲತ್ತು ಸಲ್ಲ

arrested
Published on

ಪಾಕಿಸ್ತಾನದ ಪರವಾಗಿ ಘೊಷಣೆಗಳನ್ನು ಕೂಗುವ, ಅದರ ಧ್ವಜ ಹಾರಿಸುವ ಘಟನೆಗಳು ಇತ್ತೀಚೆಗೆ ರಾಜ್ಯದಲ್ಲಿ ಜಾಸ್ತಿಯಾಗಿವೆ. ಮೂರ್ನಾಲ್ಕು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಕೆಲವು ಯುವಕರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೊಷಣೆ ಕೂಗಿದರೆನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗೆ ಮೂರು ತಂಡಗಳ ರಚನೆ ಮಾಡಿದ್ದಲ್ಲದೆ, ವಿಡಿಯೋದ ಸತ್ಯಾಸತ್ಯತೆ ಅರಿಯುವುದಕ್ಕಾಗಿ ಅದನ್ನು ಎಫ್​ಎಸ್​ಎಲ್ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿಯೂ ಇಂತಹುದೇ ಘಟನೆ ನಡೆದಿದೆ. ಈದ್ ಮಿಲಾದ್ ಹಬ್ಬದ ಆಚರಣೆ ಪ್ರಯುಕ್ತ ಬುಧವಾರ ರಾತ್ರಿ ತರೀಕೆರೆ ಪಟ್ಟಣದ ಕೋಡಿ ಕ್ಯಾಂಪ್​ನಲ್ಲಿ ಬಂಟಿಂಗ್ಸ್ ಮತ್ತು ಲೈಟಿಂಗ್ಸ್ ಕಟ್ಟಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೊಷಣೆ ಕೂಗಿರುವ ಆರೋಪ ಕೇಳಿಬಂದಿದೆ. ಇದರ ವಿಡಿಯೋಗಳು ಗುರುವಾರ ವೈರಲ್ ಆಗಿವೆ. ಆಕ್ರೋಶಗೊಂಡ ಹಿಂದೂ ಪರ ಸಂಘಟನೆ ಮುಖಂಡರು ಕೋಡಿಕ್ಯಾಂಪ್​ಗೆ ಧಾವಿಸಿ ಪ್ರಶ್ನಿಸಿದಾಗ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಲ್ಲದೆ, ಹಿಂದೂ ಸಂಘಟನೆಯ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗದಗ್​ನಲ್ಲಿ ಈದ್​ವಿುಲಾದ್ ಮೆರವಣಿಗೆ ವೇಳೆ ಯುವಕನೊಬ್ಬ ತನ್ನ ಕಾರಿನ ಬಾನೆಟ್ ಮೇಲೆ ಪಾಕಿಸ್ತಾನದ ಧ್ವಜ ಹಾಕಿಕೊಂಡಿದ್ದಲ್ಲದೆ ಅದರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇವಷ್ಟೇ ಅಲ್ಲ, ಇಂತಹ ಹಲವಾರು ಘಟನೆಗಳು ರಾಜ್ಯದ ವಿವಿಧೆಡೆ ನಡೆದಿವೆ.

ಭಾರತೀಯರ ಮನಸ್ಸಿನಲ್ಲಿ ಹಲವಾರು ದಶಕಗಳಿಂದಲೂ ಪಾಕಿಸ್ತಾನ ‘ಶತ್ರು ರಾಷ್ಟ್ರ’ ಎಂದೇ ಪರಿಗಣಿತವಾಗಿದೆ. ಇದಕ್ಕೆ ಐತಿಹಾಸಿಕ ಕಾರಣಗಳಿವೆ. ಭಾರತದ ಆಂತರಿಕ ಭದ್ರತೆಗೆ ಪಾಕಿಸ್ತಾನ ಆಗಾಗ ಬೆದರಿಕೆ ಒಡ್ಡುತ್ತಲೇ ಇರುತ್ತದೆ. ಭಾರತದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗಳ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ಹಲವಾರು ಬಾರಿ ಸಾಬೀತಾಗಿದೆ. ಗಡಿಯಾಚೆಯಿಂದಲೇ ಪರೋಕ್ಷವಾಗಿ ಉಗ್ರಚಟುವಟಿಕೆಗಳಿಗೆ ಆ ರಾಷ್ಟ್ರ ಹಲವಾರು ವರ್ಷಗಳಿಂದ ನೆರವು ನೀಡುತ್ತಿರುವುದನ್ನು ಅಲ್ಲಿನ ಕೆಲವು ರಾಜಕಾರಣಿಗಳೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಪಾಕಿಸ್ತಾನದ ಜತೆ ಎಲ್ಲ ದ್ವಿಪಕ್ಷೀಯ ಸಂಬಂಧಗಳನ್ನೂ ಭಾರತ ಕಡಿದುಕೊಂಡಿದೆ. ಪರಿಸ್ಥಿತಿ ಹೀಗಿರುವಾಗ, ಭಾರತದಲ್ಲೇ ಹುಟ್ಟಿ ಇಲ್ಲಿನ ಗಾಳಿ ನೀರು ಆಹಾರ ಸೇವಿಸಿ ಬೆಳೆದಿರುವ ಕೆಲವರು ಆ ಶತ್ರು ರಾಷ್ಟ್ರದ ಪರ ವಕಾಲತ್ತು ವಹಿಸಿದರೆ ಅದನ್ನು ನಿಜವಾದ ಭಾರತೀಯರು ಹೇಗೆ ಸಹಿಸಿಯಾರು? ಪಾಕಿಸ್ತಾನದ ಪರ ಘೊಷಣೆ ಕೂಗುವವರ ಮೇಲೆ, ಆ ರಾಷ್ಟ್ರಕ್ಕೆ ನಿಷ್ಠೆ ವ್ಯಕ್ತಪಡಿಸುವವರ ಮೇಲೆ ಕೇವಲ ಎಫ್​ಐಆರ್ ದಾಖಲಿಸಿ ಕೈತೊಳೆದುಕೊಂಡರೆ ಸಾಲದು. ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕು. ಕಠಿಣ ಕ್ರಮ ಕೈಗೊಂಡರೆ ಮಾತ್ರ ಅಂತಹ ವರ್ತನೆಗಳಿಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net