ರಾಯಭಾರ ಕಚೇರಿ ಅಧಿಕಾರಿಗಳಿಗೆ ಮೌಖಿಕವಾಗಿ ಸಲಹೆ

High Court (1)
Published on

ಬೆಂಗಳೂರು: ಸೌದಿ ಅರೇಬಿಯಾದ ದೊರೆ ಹಾಗೂ ಇಸ್ಲಾಂ ಕುರಿತು ಆಕ್ಷೇಪಾರ್ಹ ಮಾಹಿತಿ ಪೋಸ್ಟ್ ಮಾಡಿದ್ದ ಆರೋಪದಡಿ ಸೌದಿಯಲ್ಲಿ ಬಂಧಿತನಾಗಿರುವ ಮಂಗಳೂರಿನ ಶೈಲೇಶ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಮೌಖಿಕವಾಗಿ ಸಲಹೆ ನೀಡಿತು.
ಮಾಜಿ ವಿದೇಶಾಂಗ ಸಚಿವ ಕುನ್ವರ್ ನಟವರ್ ಸಿಂಗ್ ಅಥವಾ ಹಾಲಿ ವಿದೇಶಾಂಗ ಸಚಿವ ಜೆ ಜೈಶಂಕರ್ ಅವರ ಜತೆ ಸಮಾಲೋಚನೆ ನಡೆಸುವಂತೆ ಸೌದಿ ಅರೇಬಿಯಾದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಸಲಹೆ ನೀಡಿದೆ.
ಮಂಗಳೂರಿನ ಶೈಲೇಶ್ ಕುಮಾರ್ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಗುರುವಾರ ವಿಚಾರಣೆ ನಡೆಸಿತು.
ಈ ಸಂದರ್ಭದಲ್ಲಿ ಪೀಠವು ಸೌದಿಯಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿ ಮೋಯಿನ್ ಅಖ್ತರ್ ಅವರಿಂದ ಶೈಲೇಶ್ ಕುಮಾರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಿತು.
ಈ ಸಂದರ್ಭದಲ್ಲಿ ಪೀಠವು ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯೂ (ಐಎಫ್‌ಎಸ್)ಆಗಿದ್ದ ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಅವರು ಒನ್ ಲೈಫ್ ಇಸ್ ನಾಟ್ ಎನ್ ಎಂಬ ಪುಸ್ತಕ ರಚಿಸಿದ್ದು, ಅದರಲ್ಲಿ ಇಂಥ ಘಟನೆಗಳ ಬಗ್ಗೆ ಅವರು ಉಲ್ಲೇಖಿಸಿದ್ದಾರೆ. ಒಂದೊಮ್ಮೆ ವಿದೇಶವು ನಾವು ಕೋರಿದ ಮಾಹಿತಿ ಒದಗಿಸದಿದ್ದರೆ ಏನು ಮಾಡಬೇಕು ಎಂದು ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ. ಇದನ್ನು ಹೇಗೆ ನೋಡಬೇಕು ಎಂದು ತಿಳಿಸಿದ್ದಾರೆ. ಈ ದೃಷ್ಟಿಯಿಂದ ನೀವೇಕೆ ಸಿಂಗ್ ಅವರ ಜತೆ ಸಮಾಲೋಚನೆ ಮಾಡಬಾರದು? ಈ ವಿಚಾರಗಳಲ್ಲಿ ಅವರಿಗೆ ಅಗಾಧ ಅನುಭವವಿದೆ ಎಂದು ಪೀಠವು ಮೋಯಿನ್ ಅಖ್ತರ್ ಅವರನ್ನು ಕುರಿತು ಹೇಳಿತು.
ಮುಂದುವರಿದು, ೧೯೬೦ರಲ್ಲಿ ಇಂಥದ್ದೇ ಘಟನೆ ಆಫ್ರಿಕಾದ ದೇಶದಲ್ಲಿ ಘಟಿಸಿದ್ದು, ಆಗ ಅವರು ಶಕ್ದರ್ ಎಂಬ ತಮ್ಮ ಹಿರಿಯ ಸಹೋದ್ಯೋಗಿಯನ್ನು ಸಂಪರ್ಕಿಸಿದ್ದರು. ಆ ಮೂಲಕ ಅವರು ಮಾಹಿತಿ ಸಂಗ್ರಹಿಸಿದ್ದರು. ಈ ಪ್ರಕರಣದಲ್ಲಿ ಈ ನ್ಯಾಯಾಲಯಕ್ಕೆ ಸೀಮಿತ ಅವಕಾಶವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ವಿದೇಶಾಂಗ ಸಚಿವ ಅವರ ಜತೆಯೂ ಸಮಾಲೋಚನೆ ನಡೆಸಬಹುದು ಎಂದು ಪೀಠವು ಮೌಖಿಕವಾಗಿ ಹೇಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net