ಮುಂದುವರಿದ ದೇಹದ ತುಂಡುಗಳ ಪತ್ತೆ ಕಾರ್ಯ

crime
Published on

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಭೀಕರವಾಗಿ ಹತ್ಯೆಯಾಗಿದ್ದ ಚಿಟ್ ಂಡ್ ಕಂಪನಿ ಉದ್ಯೋಗಿ ಕೆ.ವಿ.ಶ್ರೀನಾಥ್ ದೇಹದ ತುಂಡುಗಳ ಪತ್ತೆ ಕಾರ್ಯ ಮುಂದುವರಿದಿದ್ದು, ಬೆಳತ್ತೂರು ರಾಜಕಾಲುವೆಯಲ್ಲಿ ರಾಮಮೂರ್ತಿನಗರ ಠಾಣೆ ಪೊಲೀಸರು ಹಾಗೂ ಮುಳುಗು ತಜ್ಞರು ಭಾನುವಾರವೂ ಕೂಡ ಶೋಧ ನಡೆಸಿದರು.
ಹಣಕಾಸು ವಿಚಾರ ಮತ್ತು ಪತ್ನಿಯೊಂದಿಗಿನ ಅಕ್ರಮ ಸಂಬಂಧದ ಕಾರಣಕ್ಕೆ ಶ್ರೀನಾಥ್‌ರನ್ನು ಕೊಲೆ ಮಾಡಿದ್ದ ಆರೋಪಿ ಮಾಧವರಾವ್, ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿದ್ದ. ಮಚ್ಚಿನಿಂದ ಶ್ರೀನಾಥ್‌ರ ತಲೆ ಮತ್ತು ದೇಹದ ಇತರೆ ಭಾಗಗಳನ್ನು ತುಂಡು ಮಾಡಿ, ಚೀಲಕ್ಕೆ ತುಂಬಿಸಿ ದ್ವಿಚಕ್ರದಲ್ಲಿ ಸಾಗಿಸಿಕೊಂಡು ಹೋಗಿ ಬೆಳತ್ತೂರು ರಾಜಕಾಲುವೆಗೆ ಎಸೆದಿದ್ದ.
ಆರೋಪಿ ಮಾಧವರಾವ್ ನೀಡಿದ ಮಾಹಿತಿ ಆಧರಿಸಿ ಶ್ರೀನಾಥ್‌ರ ಮೃತ ದೇಹದ ಭಾಗಗಳಿಗಾಗಿ ರಾಜಕಾಲುವೆಯಲ್ಲಿ ಮೂರು ದಿನಗಳಿಂದ ಸುಮಾರು ೧೦ ಕಿ.ಮೀ.ವರೆಗೆ ಶೋಧ ಕಾರ್ಯ ನಡೆಸಲಾಗಿತ್ತು. ಭಾನುವಾರ ಮತ್ತೆ ಕಾರ್ಯಾಚರಣೆ ಮುಂದುವರಿಸಿ ಸುಮಾರು ೫ ಕಿ.ಮೀ. ಶೋಧ ನಡೆಸಲಾಯಿತು. ಸಿಬ್ಬಂದಿ ಜತೆಗೆ ಮುಳುಗು ತಜ್ಞರು ರಾಜಕಾಲುವೆಯಲ್ಲಿ ಶೋಧ ನಡೆಸಿದರು. ರಾಜಕಾಲುವೆಯೊಳಗೆ ಬೆಳೆದಿರುವ ಗಿಡಗಳ ಪೊದೆಗಳಲ್ಲೂ ಪರಿಶೀಲನೆ ಮಾಡಲಾಯಿತು. ಆದರೆ, ಎಲ್ಲಿಯೂ ಮೃತ ದೇಹದ ತುಂಡುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಾಧವರಾವ್, ಶ್ರೀನಾಥ್‌ರ ಮೃತ ದೇಹದ ತುಂಡುಗಳನ್ನು ತುಂಬಿಸಿದ್ದ ಚೀಲವನ್ನು ಕಟ್ಟಿರಲಿಲ್ಲ. ಜತೆಗೆ, ಆ ಸಂದರ್ಭದಲ್ಲಿ ರಾಜಕಾಲುವೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಇರಲಿಲ್ಲ. ಮಾಧವರಾವ್, ಮೃತ ದೇಹದ ತುಂಡುಗಳನ್ನು ಎಸೆದ ನಂತರದ ದಿನಗಳಲ್ಲಿ ವ್ಯಾಪಕ ಮಳೆಯಾಗಿ ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿದೆ. ಹೀಗಾಗಿ, ಮೃತ ದೇಹದ ತುಂಡುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಬೆಳತ್ತೂರು ರಾಜಕಾಲುವೆಯ ನೀರು ಪಿನಾಕಿನಿ ನದಿಗೆ ಸೇರುತ್ತದೆ. ಸೋಮವಾರವೂ ಶೋಧ ಕಾರ್ಯ ಮುಂದುವರಿಸುತ್ತೇವೆ. ಮಾಧವರಾವ್‌ನನ್ನು ಕೊಲೆ ಘಟನೆ ನಡೆದ ವಿಜಿನಾಪುರದ ಮನೆಗೆ ಕರೆದೊಯ್ದು ಭಾನುವಾರ ಸ್ಥಳ ಮಹಜರು ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net