ವಸತಿ ಶಾಲೆ ಪ್ರವೇಶ ಸಂಕಷ್ಟ

lead bnww
Published on

| ಗಂಗಾಧರ್ ಬೈರಾಪಟ್ಟಣ ರಾಮನಗರ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ (ಕ್ರೖೆಸ್) ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ 6ನೇ ತರಗತಿ ದಾಖಲಾತಿಗೆ ರಾಜ್ಯ ಸರ್ಕಾರವು ರೂಪಿಸಿರುವ ಶೇ.50-50 ನಿಯಮದಿಂದಾಗಿ ಅರ್ಹ ಮಕ್ಕಳಿಗೆ ಸೀಟು ಸಿಗದೆ ವಂಚಿತರಾಗುತ್ತಿದ್ದಾರೆ ಎಂದು ಪಾಲಕರು ಅಳಲು ತೋಡಿಕೊಂಡಿದ್ದಾರೆ. ಒಂದೆಡೆ ಸರ್ಕಾರವು ರೂಪಿಸಿರುವ ಮಾನದಂಡಗಳ ಪ್ರಕಾರ ವಸತಿ ಶಾಲೆಗಳಿಗೆ ಮಕ್ಕಳು ದಾಖಲಾಗುತ್ತಿಲ್ಲ. ಮತ್ತೊಂದೆಡೆ, ಅರ್ಹ ಮಕ್ಕಳಿಗೆ ಸೀಟು ಸಿಗುತ್ತಿಲ್ಲ. ಇದರಿಂದ ಸಾವಿರಾರು ಸೀಟುಗಳು ಖಾಲಿ ಉಳಿಯುವಂತಾಗಿದೆ. 2023-24ನೇ ಸಾಲಿನವರೆಗೂ ರಾಜ್ಯ ಮಟ್ಟದಲ್ಲಿ ಪರೀಕ್ಷೆ ನಡೆಸಿ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತಿತ್ತು. ಬಳಿಕ ಜಿಲ್ಲಾ ಮಟ್ಟದಲ್ಲಿ ಕೌನ್ಸೆಲಿಂಗ್ ನಡೆಸಿ ಶಾಲಾರಂಭದ ವೇಳೆಗೆ ದಾಖಲಾತಿ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರೀಕ್ಷೆ ನಡೆಸಿ ಜೂ.3ರಂದು ಮೊದಲ ಪಟ್ಟಿ, ಜೂ.15ರಂದು 2ನೇ ಪಟ್ಟಿ ಪ್ರಕಟಿಸಿದೆ. 3ನೇ ಪಟ್ಟಿಯನ್ನು ಜು.10ರಂದು ಪ್ರಕಟಿಸಿದೆ. ಆದರೆ, ಈಗಾಗಲೇ ಶಾಲೆ ಆರಂಭವಾಗಿ ಒಂದೂವರೆ ತಿಂಗಳು ಕಳೆದಿದೆ. ಇನ್ನೂ ದಾಖಲಾತಿ ನಡೆಯುತ್ತಿದೆ. ದಾಖಲಾತಿ ಪ್ರಕ್ರಿಯೆ ನಡೆಸಲು ಸಮಯ ನಿಗದಿ ಮಾಡಬೇಕು ಎನ್ನುತ್ತಾರೆ ಪಾಲಕರು.

ಪಾಲಕರ ಬೇಡಿಕೆ ಏನು?: ಒಟ್ಟು 40,100 ಸೀಟುಗಳಲ್ಲಿ ವಿವಿಧ ವರ್ಗಗಳಿಗೆ ಮೀಸಲಿರುವ 20,555 ಸೀಟುಗಳಲ್ಲಿ 2ನೇ ಸುತ್ತಿನ ಸೀಟು ಹಂಚಿಕೆ ವೇಳೆಗೆ 17,648 ಸೀಟುಗಳು ಭರ್ತಿಯಾಗಿವೆ. ವಿಶೇಷ ವರ್ಗದ ವಿಭಾಗದಲ್ಲಿ 20,555 ಸೀಟುಗಳಲ್ಲಿ ಕೇವಲ 8,869 ಮಂದಿ ಮಾತ್ರ ದಾಖಲಾಗಿದ್ದು, 11,686 ಸೀಟುಗಳು ಬಾಕಿ ಉಳಿದುಕೊಂಡಿವೆ. ವಿವಿಧ

ವರ್ಗಗಳ ಸೀಟುಗಳಿಗೆ 1,86,414 ಅರ್ಜಿಗಳು ಸಂದಾಯವಾಗಿದ್ದರೆ, ವಿಶೇಷ ವರ್ಗದ ಸೀಟುಗಳಿಗೆ ಬಂದ ಅರ್ಜಿಗಳ ಸಂಖ್ಯೆ 18,081 ಮಾತ್ರ. ಹೀಗಾಗಿ ಸೀಟಿಗಾಗಿ ಕಾಯುತ್ತಿರುವ ಅರ್ಹ ಮಕ್ಕಳಿಗೆ ಭರ್ತಿಯಾಗದೆ ಉಳಿದಿರುವ ಸೀಟುಗಳನ್ನು ನೀಡುವಂತೆ ಪಾಲಕರು ಒತ್ತಾಯಿಸಿದ್ದಾರೆ.

ಅತಂತ್ರ ಸ್ಥಿತಿಯಲ್ಲಿ ಪಾಲಕರು: ಮೆರಿಟ್ ಪಡೆದಿರುವ ಸಾವಿರಾರು ಮಕ್ಕಳು ವಸತಿ ಶಾಲೆಯಲ್ಲಿ ಪ್ರವೇಶ ದೊರೆಯುವ ನಂಬಿಕೆ ಮೇಲೆ ಇನ್ನೂ ಕಾಯುತ್ತಾ ಕುಳಿತಿದ್ದಾರೆ. ಕೆಲವರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ, ಸೀಟು ಸಿಗುವ ಭರವಸೆಯಲ್ಲಿಯೇ ಶುಲ್ಕವನ್ನು ಕಟ್ಟದೆ ಸುಮ್ಮನಿದ್ದಾರೆ. ಒಂದೆಡೆ ಸೀಟುಗಳು ಭರ್ತಿಯಾಗುತ್ತಿಲ್ಲ, ಮತ್ತೊಂದೆಡೆ ದಾಖಲಾತಿಯೂ ದೊರೆಯದೇ ಇರುವುದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಹೊಸ ನಿಯಮವೇನಿದೆ?: ರಾಜ್ಯದ 834 ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಒಟ್ಟು 41,110 ಸೀಟುಗಳಿವೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಪ್ರಕಾರ ಶೇ.50-50 ನಿಯಮ ರೂಪಿಸಿದೆ. ಶೇ.50 ಸೀಟುಗಳನ್ನು ವಿವಿಧ ವರ್ಗಗಳ ಮಕ್ಕಳಿಗೆ ಪರೀಕ್ಷೆ ಮೂಲಕ ಭರ್ತಿ ಮಾಡುವುದು. ಉಳಿದ ಶೇ.50 ಸೀಟುಗಳನ್ನು ವಿಶೇಷ ವರ್ಗಗಳ ಮೀಸಲಾತಿ ಅಡಿ ಬರುವ ಮಕ್ಕಳಿಗೆ ನೇರ ದಾಖಲಾತಿ ಮೂಲಕ ಭರ್ತಿ ಮಾಡಲು ಸೂಚನೆ ನೀಡಿದೆ. ವಿಶೇಷ ವರ್ಗಗಳ ಅಡಿಯಲ್ಲಿ ಸಫಾಯಿ ಕರ್ಮಚಾರಿ, ಬಾಲ ಕಾರ್ವಿುಕರು, ಜೀತ ವಿಮುಕ್ತಿ ಪಡೆದ ಮಕ್ಕಳು, ಶೇ.25ಕ್ಕಿಂತ ಹೆಚ್ಚಿನ ಅಂಗವೈಕಲ್ಯ, ಎಚ್​ಐವಿ ಪೀಡಿತ ಪಾಲಕರ ಮಕ್ಕಳು, ಏಕಪಾಲಕ ಮಕ್ಕಳು, ಅಲೆಮಾರಿ, ಅರೆ ಅಲೆಮಾರಿ ಮಕ್ಕಳು, ಪರಿಶಿಷ್ಟ ಜಾತಿ/ಪಂಗಡ, ಆಶ್ರಮ ಶಾಲೆಯಲ್ಲಿ 5ನೇ ತರಗತಿ ಪಾಸಾದ ಮಕ್ಕಳನ್ನು ನೇರ ನೇಮಕಾತಿ ಮೂಲಕ ದಾಖಲಾತಿ ಮಾಡಿಕೊಳ್ಳಬಹುದಾಗಿದೆ.

ಸರ್ಕಾರ ವಿಶೇಷ ವರ್ಗಗಳ ಮೀಸಲಾತಿ ಅಡಿಯಲ್ಲಿ ದಾಖಲಾತಿಗೆ ಕಾಲಮಿತಿ ನಿಗದಿ ಮಾಡಬೇಕು. ನಂತರವೂ ಉಳಿಕೆ ಸೀಟುಗಳಲ್ಲಿ ಇತರ ವರ್ಗಗಳ ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ನೀಡಬೇಕು. | ಹೆಸರು ಹೇಳಲಿಚ್ಛಿಸದ ಅಧಿಕಾರಿ ವಿಶೇಷ ವರ್ಗದ ಮಕ್ಕಳಿಗೆ ಅವಕಾಶ ಕಲ್ಪಿಸಬೇಕೆಂಬ ಸದುದ್ದೇಶದಿಂದ ಸರ್ಕಾರವು ಮೀಸಲಾತಿ ಜಾರಿಗೊಳಿಸಿದೆ. ಅಭಿಯಾನ ನಡೆಸಿ ವಿಶೇಷ ವರ್ಗದ ಮಕ್ಕಳಿಗೆ ಪ್ರವೇಶ ನೀಡಲಾಗುತ್ತಿದೆ. ಖಾಲಿ ಉಳಿದ ಸೀಟುಗಳನ್ನು ಏನು ಮಾಡಬೇಕೆಂಬುದರ ಬಗ್ಗೆ ಸರ್ಕಾರವು ಸದ್ಯದಲ್ಲಿಯೇ ಕ್ರಮ ಕೈಗೊಳ್ಳಲಿದೆ. | ಲತಾಕುಮಾರಿ ಕಾರ್ಯನಿರ್ವಾಹಕ ನಿರ್ದೇಶಕಿ, ಕ್ರೖೆಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net