

ಕೋಲಾರ: ಪ್ರಸಕ್ತ ಸಾಲಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, 1 ಲಕ್ಷ ಅಭ್ಯರ್ಥಿಗಳ ಪ್ರವೇಶಾತಿ ಗುರಿ ಇದೆ ಎಂದು ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಎಸ್ಒಯು ಹೊರತುಪಡಿಸಿ ರಾಜ್ಯದ ಬೇರೆ ಯಾವುದೇ ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿಲ್ಲ. ಆದರೆ, ಆನ್ಲೈನ್ ಶಿಕ್ಷಣಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಈಗಾಗಲೇ ವಿಶ್ವವಿದ್ಯಾಲಯಕ್ಕೆ ನ್ಯಾಕ್ನಿಂದ ಎ+ ಗ್ರೇಡ್ ದೊರೆತಿದೆ. 2028ರವರೆಗೆ ಯುಜಿಸಿ ಮಾನ್ಯತೆ ಸಿಕ್ಕಿದೆ. ಈ ವರ್ಷದಿಂದ ಏಕಕಾಲದಲ್ಲಿ ಡಬಲ್ ಪದವಿ ಮಾಡಲು ಅವಕಾಶ ಕಲ್ಪಿಸಿದ್ದೇವೆ. ನಮ್ಮಲ್ಲಿನ ಕೋರ್ಸ್ ಪ್ರವೇಶಾತಿಗೆ ಯಾವುದೇ ವಯೋಮಿತಿ ಇಲ್ಲ. 67 ವರ್ಷದ ವ್ಯಕ್ತಿಯೊಬ್ಬರು ಎಂ.ಕಾಂ.ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ ಎಂದರು.
ದೇಶದಲ್ಲಿ ಒಟ್ಟು 17 ಮುಕ್ತ ವಿಶ್ವವಿದ್ಯಾಲಯಗಳಿವೆ. ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಕೇಂದ್ರ ಮಟ್ಟದಲ್ಲಿ ಇದ್ದರೆ ಉಳಿದ 16 ವಿಶ್ವವಿದ್ಯಾಲಯಗಳು ರಾಜ್ಯ ಮಟ್ಟದಲ್ಲಿವೆ. ನಮ್ಮಲ್ಲಿ 64 ಕೋರ್ಸ್ಗಳಿದ್ದು, ಅತಿ ಹೆಚ್ಚು ಕೋರ್ಸ್ ಹೊಂದಿರುವ ವಿಶ್ವವಿದ್ಯಾಲಯ ಕೂಡ. ಮಾ.31ರ ವರೆಗೆ ಪ್ರವೇಶಾತಿಗೆ ಅವಕಾಶವಿದೆ ಎಂದು ತಿಳಿಸಿದರು.
ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆಯುವುದರಿಂದ ಬಡ ವಿದ್ಯಾರ್ಥಿಗಳ ಉದ್ಯೋಗಕ್ಕೆ ಅನುಕೂಲವಾಗಲಿದೆ. ಉನ್ನತ ಶಿಕ್ಷಣ ಮನೆ ಬಾಗಿಲಿನಲ್ಲೇ ದೊರೆಯಬೇಕೆಂಬ ಧ್ಯೇಯವನ್ನು ವಿಶ್ವವಿದ್ಯಾಲಯ ಹೊಂದಿದೆ. ತೃತೀಯ ಲಿಂಗಿಗಳಿಗೆ, ಯೋಧರ ಮಕ್ಕಳಿಗೆ ಉಚಿತ ಪ್ರವೇಶವಿದೆ. ಆಟೋ, ಬಸ್ ಚಾಲಕರು, ಕೋವಿಡ್ನಿಂದ ಪಾಲಕರು ಮೃತಪಟ್ಟಿದ್ದರೆ ಅವರ ಮಕ್ಕಳಿಗೆ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮಹಿಳೆಯರಿಗೆ ಶುಲ್ಕ ರಿಯಾಯಿತಿ ಸಹ ಇದೆ ಎಂದರು.
ರಾಜ್ಯದಲ್ಲಿ 36 ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದ್ದೇವೆ. ರಾಜ್ಯದ 10 ಕಡೆಗಳಲ್ಲಿ ಪ್ರಾದೇಶಿಕ ಕೇಂದ್ರವು ಸ್ವಂತ ಕಟ್ಟಡವನ್ನು ಹೊಂದಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಕೇಂದ್ರಗಳ ನಿಮಾರ್ಣಕ್ಕೆ ಅನುದಾನವಿದೆ. ಎಲ್ಲ ಜಿಲ್ಲೆಗಳಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪಿಸುತ್ತಿದ್ದೇವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಲಾಗುತ್ತಿದೆ. ಉದ್ಯೋಗ ಪ್ಲೇಸ್ಮೆಂಟ್ ಮೇಳ ನಡೆಸುತ್ತಿದ್ದೇವೆ. ಸೈಬರ್ ಸೆಕ್ಯುರಿಟಿ ಕೋರ್ಸ್ ಆರಂಭಿಸಲು ಯೋಜನೆ ರೂಪಿಸಿದ್ದೇವೆ ಎಂದು ಪ್ರೊ.ಶರಣಪ್ಪ ವಿ. ಹಲಸೆ ತಿಳಿಸಿದರು.
ನಮ್ಮಲ್ಲಿನ ಪ್ರಮಾಣಪತ್ರ, ಅಂಕಪಟ್ಟಿಗೆ ಎಲ್ಲ ಕಡೆ ಮೌಲ್ಯವಿದೆ. ಬಹಳ ಹಿಂದಿನ ಕೆಲ ಅಭ್ಯರ್ಥಿಗಳಿಗೆ ಇನ್ನು ಪ್ರಮಾಣಪತ್ರ ಸಿಕ್ಕಿಲ್ಲ ಎಂಬುದು ನಿಜ. ಆ ವಿಚಾರ ನ್ಯಾಯಾಲಯದಲ್ಲಿದೆ. ಬೇಗನೇ ಪರಿಹಾರವಾಗಲಿದೆ ಎಂದರು.
ಆಡಳಿತ ಕುಲಸಚಿವ ಕೆ.ಎಲ್.ಎನ್.ಮೂರ್ತಿ, ಪ್ರಾದೇಶಿಕ ಕೇಂದ್ರಗಳ ಮುಖ್ಯಸ್ಥ ರಾಮರತ್ನಂ ನಾಯ್ಡು, ಕೋಲಾರ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಗೋಪಾಲ್ ಹಾಜರಿದ್ದರು.