

ಮುಂಬೈ: ಬಾಲಿವುಡ್ನ ಹಿರಿಯ ಜನಪ್ರಿಯ ನಟಿ ಆಶಾ ಶರ್ಮಾ (88) ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಈ ವಿಷಯವನ್ನು ಸಿನಿ ಮತ್ತು ಕಿರುತೆರೆ ಕಲಾವಿದರ ಸಂಘ ತನ್ನ ಟ್ವಿಟರ್ ಖಾತೆಯ ಮೂಲಕ ತಿಳಿಸಿದೆ. ಆದರೆ ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ.
ಹಲವು ವರ್ಷಗಳಿಂದ ಟಿವಿ ಶೋಗಳಲ್ಲಿ ಪಾಲ್ಗೊಳ್ಳುತ್ತಾ ಪ್ರೇಕ್ಷಕರ ಮನಗೆದ್ದಿದ್ದ ಆಶಾ ಶರ್ಮಾ ಮೃತಪಟ್ಟಿರುವುದಕ್ಕೆ ಬಾಲಿವುಡ್ನ ಹಲವು ಸೆಲಬ್ರೆಟಿಗಳು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ.
ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅಭಿನಯದ 'ದೋ ದಿಶಾಯೀನ್' ಚಿತ್ರದಲ್ಲಿ ಆಶಾ ಶರ್ಮಾ ಅಮೋಘವಾಗಿ ಅಭಿನಯಿಸಿದ್ದರು. ಅವರು ತಾಯಿ ಮತ್ತು ಅಜ್ಜಿಯ ಪಾತ್ರಗಳೊಂದಿಗೆ ಅಭಿಮಾನಿಗಳ ಹೃದಯದಲ್ಲಿ ಅಳಿಸಲಾಗದ ಮುದ್ರೆ ಹಾಕಿದ್ದಾರೆ.
ಬೆಳ್ಳಿತೆರೆಯಲ್ಲಿ ಮಜೆಕುಚ್ ಕೆಹಾನಾ ಹೈ, ಪ್ಯಾರ್ ತೋ ಹಿನಾ ಹೋ ಥಾ, ಹಮ್ ತುಮ್ಹಾರೆ ಹೈ ಸನಮ್ ಮುಂತಾದ ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿದ್ದಾರೆ. ಹಲವು ಸ್ಟಾರ್ ಹೀರೋ ಚಿತ್ರಗಳಲ್ಲಿ ನಟಿಸಿದ್ದಾರೆ. ಆಶಾ ಶರ್ಮಾ ಕೊನೆಯದಾಗಿ ಪ್ರಭಾಸ್ ಮತ್ತು ಕೃತಿಸನನ್ ಅಭಿನಯದ 'ಆದಿಪುರುಷ' ಚಿತ್ರದಲ್ಲಿ ನಟಿಸಿದ್ದರು. ಆಕೆಯ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.