

ಬಾಳೆಹೊನ್ನೂರು: ಎನ್.ಆರ್.ಪುರದಲ್ಲಿ ಪ್ರತಿನಿತ್ಯ ಹತ್ತಾರು ಬಾರಿ ವಿದ್ಯುತ್ ಕಡಿತವಾಗುತ್ತಿದ್ದು, ಮೆಸ್ಕಾಂ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಒತ್ತಾಯಿಸಿದರು.
ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ನಡೆದ ಬಾಳೆಹೊನ್ನೂರು ಉಪ ವಿಭಾಗದ ಮೆಸ್ಕಾಂ ಗ್ರಾಹಕರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಎನ್.ಆರ್.ಪುರ ತಾಲೂಕು ಕೇಂದ್ರವಾಗಿದ್ದರೂ ಸಹ ಪ್ರತಿನಿತ್ಯ ಹತ್ತಾರು ಬಾರಿ ವಿದ್ಯುತ್ ಕಡಿತವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಮಾತ್ರವಲ್ಲದೇ ಸರ್ಕಾರಿ ಇಲಾಖೆ ಕರ್ತವ್ಯಕ್ಕೆ, ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಕ್ಕೆ ಬರುವ ಜನರಿಗೆ ತೀವ್ರವಾಗಿದೆ ಎಂದರು.
ರೈತರು ಪಂಪ್‌ಸೆಟ್ ಆನ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಮೆಸ್ಕಾಂ ಇಲಾಖೆ ಈಗಾಗಲೇ ಸೇವೆಯಿಂದ ಹೊರ ಬಂದು ಉದ್ಯಮವಾಗಿ ಹೊರಹೊಮ್ಮಿದೆ. ಆದರೂ ಗ್ರಾಹಕರಿಗೆ ಸೂಕ್ತ ಸೇವೆ ನೀಡುತ್ತಿಲ್ಲ. ಗ್ರಾಹಕರಿಗೆ ಸಮರ್ಪಕ ವಿದ್ಯುತ್ ನೀಡಿದರೆ ವಿದ್ಯುತ್ ಬಳಕೆ ಹೆಚ್ಚಾಗಿ ಇಲಾಖೆಗೂ ಲಾಭವಾಗಲಿದೆ ಎಂದು ತಿಳಿಸಿದರು.
ಮೆಸ್ಕಾಂ ಇಲಾಖೆ ಸಮರ್ಪಕವಾಗಿ ಜನಸಂಪರ್ಕ ಸಾಧಿಸಿ ಜನಸ್ನೇಹಿಯಾಗಬೇಕು. ಜನಸಂಪರ್ಕ ಸಭೆಯಲ್ಲಿ ಕೇವಲ ಬೆರಳೆಣಿಕೆ ಜನರನ್ನು ಸೇರಿಸುವುದಲ್ಲ. ಹೆಚ್ಚಿನ ಗ್ರಾಹಕರನ್ನು ಸೇರಿಸಿ ಅವರ ಸಮಸ್ಯೆ ಅರಿಯುವ ಪ್ರಯತ್ನವಾಗಬೇಕು. ಮೆಸ್ಕಾಂ ಲೈನ್‌ಮೆನ್‌ಗಳು ಗ್ರಾಹಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಸಮರ್ಪಕ ಕೆಲಸ ಮಾಡಬೇಕು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ವಿನಾಯಕ್ ಮಾಳೂರುದಿಣ್ಣೆ ಮಾತನಾಡಿ, ಮೆಸ್ಕಾಂನಲ್ಲಿ ಎಇಇಗಳ ನೇಮಕವಾಗದೇ ಕೇವಲ ಒಬ್ಬರೇ ಎಇಇ ಎರಡೆರಡು ಕಡೆಗಳಲ್ಲಿ ಕಾರ್ಯನಿರ್ವಹಿಸಬೇಕಿದೆ. ಇದರಿಂದ ಅವರಲ್ಲಿ ಕಾರ್ಯಭಾರ ಹೆಚ್ಚಾಗಿ ಸಮರ್ಪಕವಾಗಿ ಕೆಲಸ ಮಾಡಲಾಗುತ್ತಿಲ್ಲ. ಅವರ ಕರ್ತವ್ಯಕ್ಕೆ ತಕ್ಕ ಪ್ರತಿಲ ಇಲಾಖೆಯಿಂದ ದೊರೆಯುತ್ತಿಲ್ಲ. ಅಧಿಕಾರಿಗಳ ನೇಮಕಾತಿ ಸಮರ್ಪಕವಾಗಿ ಆಗಬೇಕು ಎಂದರು.
ಮಲೆನಾಡು ಭಾಗದಲ್ಲಿ ಕೇಬಲ್ ಮೂಲಕ ವಿದ್ಯುತ್‌ಲೈನ್ ಹೆಚ್ಚು ಎಳೆಯಲು ಕ್ರಮಕೈಗೊಳ್ಳಬೇಕು. ವಿದ್ಯುತ್‌ಲೈನ್ ಕೆಳಗೆ ಕೃಷಿಕರು ಮರಗಳನ್ನು ನೆಡದಂತೆ ಸೂಕ್ತ ಕ್ರಮವಹಿಸಬೇಕು. ಗ್ರಾಹಕರಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.