

ಚನ್ನರಾಯಪಟ್ಟಣ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ಹೆಚ್ಚುವರಿಯಾಗಿ ಅನುದಾನವನ್ನು ತಂದು ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ವ್ಯಾಪ್ತಿಯಲ್ಲಿ ಬುಧವಾರ ಅಲ್ಪಸಂಖ್ಯಾತರ ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಭಾಗದ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಚರಂಡಿಗಳು ಹಾಳಾಗಿದ್ದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ 3 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿಸಿದ್ದು, ಬಾಕಿ ಉಳಿದಿರುವ ಕಾಮಗಾರಿಗಳ ಅಭಿವೃದ್ಧಿ ಕೈಗೊಳ್ಳಲಾಗುವುದು. ಸ್ಥಳೀಯ ನಿವಾಸಿಗಳು ಕಾಮಗಾರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಇತ್ತೀಚೆಗೆ ಮುಖ್ಯರಸ್ತೆಯಿಂದ ಡಿ.ಕಾಳೇನಹಳ್ಳಿ ರಸ್ತೆ ಹಾಗೂ ನವೋದಯ ಶಾಲೆ ಹಿಂಭಾಗದ ರಸ್ತೆಯಿಂದ ತಗ್ಯಮ್ಮನ ಬಡಾವಣೆಗೆ ಸಂಪರ್ಕಿಸು ಒಟ್ಟು 2.5 ಕಿ.ಮೀ. ರಸ್ತೆಯನ್ನು ಎರಡು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ವಿವಿಧ ಇಲಾಖೆಯ ಅನುದಾನ ಲಭ್ಯತೆ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಹೌಸಿಂಗ್ ಬೋರ್ಡ್ ನಿವಾಸಿಗಳ ಬಹುದಿನದ ಬೇಡಿಕೆಯಾದ ದೇವಸ್ಥಾನದ ಮುಂದೆ ಕಮಾನು ನಿರ್ಮಿಸಿ ಮಹಿಳೆಯರಿಗೆ ಸಂಘ, ಸಭೆಗಳು ನಡೆಸಲು ಅನುಕೂಲ ಮಾಡಿಕೊಡಲಾಗುವುದೆಂದು ತಿಳಿಸಿದರು.
ಪುರಸಭಾ ಅಧ್ಯಕ್ಷ ಸಿ.ಎನ್.ಮೋಹನ್, ತಳಿಯ ಪುರಸಭಾ ಸದಸ್ಯ ಭಾಗ್ಯಲಕ್ಷ್ಮೀ ಗಿರೀಶ್ ಮಾಜಿ ಸದಸ್ಯ ಸುರೇಶ್, ಮುಖಂಡರಾದ ಶಂಕರ್ ಚಂದ್ರು ನಾಗರಾಜು, ನಿಂಗಪಣ್ಣ, ಕುಮಾರ್, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.