

ಬೆಂಗಳೂರು: ಹಿಂದು ಕಾರ್ಯಕರ್ತ, ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ), ನಾಲ್ವರ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ 2ನೇ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದೆ.
ಜನವರಿಯಲ್ಲಿ ಬಂಧಿತ ಅತೀಕ್ ಅಹಮದ್ ಮತ್ತು ತಲೆಮರೆಸಿಕೊಂಡಿರುವ ಅಬ್ದುಲ್ ನಾಸೀರ್, ನೌಷದ್, ಅಬ್ದುಲ್ ರೆಹಮಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆಯಡಿ (ಯುಎಪಿಎ) ವಿವಿಧ ಸೆಕ್ಷನ್‌ಗಳನ್ನು ವಿಧಿಸಲಾಗಿದೆ. ಇದರಿಂದ ಆರೋಪಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಈ ಪೈಕಿ 21 ಮಂದಿ ಬಂಧಿಸಿದರೆ ಆರು ಮಂದಿ ತಲೆಮರೆಸಿಕೊಂಡಿದ್ದು, ಮತ್ತೋರ್ವ ಮೃತಪಟ್ಟಿದ್ದಾನೆ ಎಂದು ಎನ್‌ಐಎ ತಿಳಿಸಿದೆ.
ಮೈಸೂರು, ಚಾಮರಾಜನಗರ ಹಾಗೂ ತಮಿಳುನಾಡಿನ ಈರೋಡ್ ಜಿಲ್ಲೆಗಳಲ್ಲಿ ಮುಖ್ಯ ಆರೋಪಿಗಳಿಗೆ ನಾಪತ್ತೆ ಆಗಿರುವ ಅಬ್ದುಲ್ ನಾಸೀರ್, ನೌಷದ್ ಹಾಗೂ ರೆಹಮಾನ್ ಆಶ್ರಯ ನೀಡಿದ್ದರು.
ಅಲ್ಲದೆ, ತುಫೈಲ್ ಎಂಬಾತನಿಗೆ ಬೆಂಗಳೂರಿನಲ್ಲಿ ಆಶ್ರಯ ಕೊಟ್ಟಿದ್ದರು ಎಂದು ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ. 2022ರ ಜು.26ರಂದು ದಕ್ಷಿಣ ಕನ್ನಡ ಸುಳ್ಳ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಪ್ರವೀಣ್ ನೆಟ್ಟಾರನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆಗಸ್ಟ್ 4ರಂದು ಎನ್‌ಐಎ ತನಿಖೆ ಆರಂಭಿಸಿತ್ತು.