

ಧಾರವಾಡ: ಟಿಪ್ಪು ನಿಜಕನಸುಗಳು ನಾಟಕ ಹಾಗೂ ಕೃತಿಯ ಮೂಲಕ ರಾಜ್ಯಾದ್ಯಂತ ವಿವಾದದ ಅಲೆಯನ್ನೂ ಎಬ್ಬಿಸಿ ಅನೇಕರ ಮೆಚ್ಚುಗೆಗೂ ಪಾತ್ರರಾಗಿದ್ದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಗಿರೀಶ್ ಕಾರ್ನಾಡ್ರನ್ನು ಡುಪ್ಲಿಕೇಟ್ ಎಂದು ಕರೆದಿದ್ದಾರೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಾರ್ಯಕ್ರಮದಲ್ಲಿ ನಿರ್ಬಂಧದಿಂದ ಹೊರ ಬಂದಿರುವ 'ಟಿಪ್ಪು ನಿಜ ಕನಸುಗಳು' ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅಡ್ಡಂಡ ಕಾರ್ಯಪ್ಪ, 'ಗಿರೀಶ ಕಾರ್ನಾಡ್ ನಮಗೆ ಭಾವ ಆಗಬೇಕು. ಅವರ ಪತ್ನಿ ನಮ್ಮೂರಿನ ಕಡೆಯವರು. ಹೀಗಾಗಿ ಕಾರ್ನಾಡ್ ನಮಗೆ ಭಾವ. ನಮ್ಮ ಭಾವನವರ ಬಗ್ಗೆ ನಾನು ಏನಾದರೂ ಮಾತನಾಡಬಹುದು. ಕುರ್ತಕೋಟಿಯವರು ಬರೆದಿದ್ದಕ್ಕೆ ಹೆಸರು ಕಾರ್ನಾಡರದ್ದು. ಅವರು ಗೋಪಾಲ ವಾಜಪೇಯಿಯವರ ಹಾಡಿಗೂ ತಮ್ಮ ಹೆಸರು ಹಾಕಿದ್ದರು. ಆದರೆ ಕೋರ್ಟ್‌ಗೆ ಹೋದ ಮೇಲೆ ವಾಪಸ್ ತಗೊಂಡರು. ಕೃತಿ ಚೌರ್ಯ ಮಾಡುವುದರಲ್ಲಿ ಕಾರ್ನಾಡ್ ಫೇಮಸ್ ವ್ಯಕ್ತಿ. 25 ವರ್ಷದ ಹಿಂದೆ ಕಾರ್ನಾಡ್ ಟಿಪ್ಪು ಕಂಡ ಕನಸು ನಾಟಕ ಮಾಡಿದ್ದಾರೆ. ಅದರಲ್ಲಿ ಸತ್ಯದ ತಲೆಗೆ ಹೊಡೆದಂತೆ ಸುಳ್ಳು ತುಂಬಿದ್ದಾರೆ. ಪ್ರಶಸ್ತಿಯ ಮೇಲೆ ಕಣ್ಣು ಇಟ್ಟು ಅವರು ಬರೆಯುತ್ತಿದ್ದರು. ಇಂತಹ ಡುಪ್ಲಿಕೇಟ್ ಕಾರ್ನಾಡ್' ಎಂದಿದ್ದಾರೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಂಡಿದ್ದು ಶಾಸಕ ಸಿ.ಟಿ. ರವಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.ಈ ಕಾರ್ಯಕ್ರಮವನ್ನು ಪ್ರಜ್ಞ ಪ್ರವಾಹ ಸಂಘಟನೆ ಆಯೋಜನೆ ಮಾಡಿತ್ತು.