ಕೇಂದ್ರ ಪತ್ರ ಬರೆದರೆ ರಾಜ್ಯದಲ್ಲಿರುವ ಅದಾನಿ ಆಸ್ತಿ ಮುಟ್ಟುಗೋಲು

Adani
Published on

ಬೆಂಗಳೂರು: ರಾಜ್ಯದಲ್ಲಿರುವ ಉದ್ಯಮಿ ಅದಾನಿ ಆಸ್ತಿಗಳನ್ನು ಮುಟ್ಟುಗೋಲು ಹಾಕುವಂತೆ ಕೇಂದ್ರ ಸರ್ಕಾರ ಪತ್ರ ಬರೆದರೆ ನಮ್ಮ ಕ್ರಮಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಷ್ಠಿಯಲ್ಲಿ, ಅದಾನಿಯವರ ಆಸ್ತಿಗಳು ರಾಜ್ಯದಲ್ಲಿದ್ದು ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ತಾಕತ್ತಿದೆಯೇ ಎಂಬ ಬಿಜೆಪಿ ನಾಯಕರ ಸವಾಲಿನ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ, ಕೇಂದ್ರ ಸರ್ಕಾರ ಮೊದಲು ತನಿಖೆ ಆರಂಭಿಸಿ, ತಮ್ಮ ಕರ್ತವ್ಯ ಮಾಡಲಿ. ತನಿಖೆ ಆರಂಭಿಸಿ ನಮ್ಮ ರಾಜ್ಯ ಸರ್ಕಾರಕ್ಕೆ ಈ ವಿಚಾರವಾಗಿ ಪತ್ರ ಬರೆದರೆ ನಮ್ಮ ಸರ್ಕಾರ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲಿದೆ. ಇಷ್ಟು ದಿನ ಅವರು ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಈಗ ಕ್ರಮ ಕೈಗೊಳ್ಳಲು ಮುಂದಾಗಲಿ ಎಂದರು.

ಕರ್ನಾಟದಲ್ಲಿ 20 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಅದರಿಂದ ಸರ್ಕಾರ ಹಿಂದೆ ಸರಿಯಲಿದೆಯೇ ಎಂದು ಪ್ರಶ್ನಿಸಿದಾಗ, ಸ್ವಚ್ಛವಾಗಿ ನಡೆಯಲಿರುವ ಯೋಜನೆಗಳಿಗೆ ನಾವು ಆಕ್ಷೇಪ ಮಾಡುವುದಿಲ್ಲ. ಈ ವಿಚಾರವಾಗಿ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ ಚರ್ಚೆ ಮಾಡುತ್ತೇವೆ. ಮೊದಲು ಕೂಸು ಹುಟ್ಟಬೇಕು. ಆನಂತರ ಮುಂದಿನ ಕಾರ್ಯ ಮಾಡಬಹುದು ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ಇಷ್ಟು ದಿನಗಳ ಕಾಲ ಅದಾನಿ ಅವರನ್ನು ರಕ್ಷಣೆ ಮಾಡಿಕೊಂಡು ಬಂದಿದೆ. ಈಗಲಾದರೂ ದೇಶದ ಗೌರವ ಉಳಿಸಲು ಅವರನ್ನು ಬಂಧಿಸಿ, ಕಾನೂನು ಚೌಕಟ್ಟಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಅದಾನಿಯವರನ್ನು ರಕ್ಷಣೆ ಮಾಡಿ ಪ್ರಯೋಜನವಿಲ್ಲ. ದೇಶದ ಜನಸಾಮಾನ್ಯರು ಅವರ ಕಂಪನಿಗಳ ಮೇಲೆ ಸಾವಿರಾರು ಕೋಟಿ ಹೂಡಿಕೆ ಮಾಡಿದ್ದು, ಅವರ ಕಂಪನಿ ಷೇರು ಬಿದ್ದು ಹೋಗುತ್ತಿದೆ. ಕೇಂದ್ರ ಸರ್ಕಾರ ಇವರ ರಕ್ಷಣೆ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net