

ಬೆಂಗಳೂರು: ಅದಾನಿ ಕಾನೂನು ಬಾಹಿರವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಮೋದಿಯವರು ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಪ್ರಕರಣದಲ್ಲಿ ಅವರ ವಿರುದ್ಧ ಐದಾರು ವರ್ಷಗಳಿಂದ ಸತತವಾಗಿ ವಿಷಯ ಎತ್ತಿದ್ದೇವೆ, ಆದರೂ ಕೂಡ ಮೋದಿ ಇಲ್ಲಿಯವರೆಗೂ ಚಕಾರ ಎತ್ತಿಲ್ಲ. ಅವರ ಬಳಿ ಇಡಿ, ಸಿಬಿಐ ಇದೆ, ತನಿಖೆ ಮಾಡಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಈ ವಿಚಾರ ಎತ್ತಿದಾಗ ಅದು ವಿದೇಶದಲ್ಲಿ ಎಂದು ಸುಳ್ಳು ಹೇಳಿದ್ದರು. ಹಿಂಡನ್‌ಬರ್ಗ್ ವರದಿ ಬಗ್ಗೆಯೂ ನಕರಾತ್ಮಕವಾಗಿ ಮಾತನಾಡಿದರು. ವಿದೇಶದಲ್ಲೂ ಕೂಡ ಇಂತಹ ಭ್ರಷ್ಟಾಚಾರ ವಿಚಾರ ಹೊರಗೆ ಬರುತ್ತಿದೆ. ಇಲ್ಲದಿದ್ದರೆ ಇವರು ಮಾನ ಹಾನಿ ಕೇಸ್ ಹಾಕಲಿ ಎಂದು ಸವಾಲು ಹಾಕಿದರು.
ನಾವು ರಾಜಕೀಯವಾಗಿ ಮಾತನಾಡುತ್ತೇವೆ ಅಂತ ನೀವು ಹೇಳಬಹುದು, ಆದರೆ ಹೊರಗಿನವರು ಎಲ್ಲರೂ ಹೇಳುತ್ತಿದ್ದಾರೆ. ನಮಗೆ ಇರುವ ಕಳಕಳಿ ಏನಂದರೆ ನಮ್ಮ ದೇಶದ ಆಸ್ತಿಯನ್ನು ಅವರಿಗೆ ಕೊಡುತ್ತಿದ್ದೇವೆ. ನ್ಯಾಯವಾಗಿ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಸರ್ಕಾರಿ ಜಮೀನು ತೆಗೆದುಕೊಳ್ಳುವುದು ಮಾರಿಕೊಳ್ಳುವುದು, ಅದನ್ನೇ ಆಸ್ತಿ ತೋರಿಸಿ ಸರ್ಕಾರಿ ಬ್ಯಾಂಕ್‌ನಿಂದ ಸಾಲ ತೆಗೆದುಕೊಳ್ಳುವುದು. ಇದೆಲ್ಲವನ್ನ ಮಾಡುವುದಕ್ಕೆ ಸರ್ಕಾರ ಕೂಡ ಅವರನ್ನು ಪೂರ್ಣ ಪ್ರಮಾಣದಲ್ಲಿ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಅದಾನಿ ಮುಖಾಂತರ ಸರ್ಕಾರ ಕೂಡ ಸಹಾಯ ಪಡೆದುಕೊಳ್ಳುತ್ತಿದೆ, ಅವರ ಪಕ್ಷಕ್ಕೂ ಸಹಾಯ ಪಡೆದುಕೊಳ್ಳುತ್ತಿದ್ದಾರೆ. ಮೋದಿ ಹೊರಗಡೆ ಬಹಳ ನ್ಯಾಯ ಸ್ವಚ್ಛ ಅಂತ ಭಾಷಣ ಮಾಡುತ್ತಾರೆ, ಅವರ ನಡವಳಕೆ ಕೂಡ ಸ್ವಚ್ಛವಾಗಿ ಇರಬೇಕು. ಎಲ್ಲಾ ಹೂಡಿಕೆ ತಮಗೆ ಬೇಕಾದ ರಾಜ್ಯಗಳಿಗೆ ತೆಗೆದುಕೊಂಡು ಹೋಗುತ್ತಾರೆ ಎಂದರು.