'ಕಲ್ಕಿ' ಚಿತ್ರಕ್ಕೆ ನಟ ಪ್ರಭಾಸ್ ಪಡೆದ ಸಂಭಾವನೆ ಎಷ್ಟು? ಈ ವಿಷಯ ತಿಳಿದ್ರೆ ಖಂಡಿತ ಅಚ್ಚರಿ ಪಡ್ತೀರಾ!

Untitled-design-2024-06-24T124307.829
Published on

ಹೈದರಾಬಾದ್​: ಈ ಹಿಂದಿನಿಂದಲೂ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿರುವ ಟಾಲಿವುಡ್​ನ​ ರೆಬೆಲ್ ಸ್ಟಾರ್​ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ, ಸೈನ್ಸ್​ ಫಿಕ್ಷನ್​ ಆಧರಿತ ‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣ ಇದೀಗ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಇದೇ ಜೂನ್​ 27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಇನ್ನು ಬಿಡುಗಡೆಗೂ ಮುನ್ನವೇ ಚಿತ್ರ ಭಾರೀ ಸದ್ದು ಮಾಡುತ್ತಿದ್ದು, ಈಗಾಗಲೇ ಆಯಾ ರಾಜ್ಯಗಳಲ್ಲಿ ಮುಂಗಡ ಬುಕ್ಕಿಂಗ್​ಗಳು ತುಂಬಿ ಹೋಗಿವೆ.

ಪ್ರಭಾಸ್​ ಸದ್ಯ 'ಕಲ್ಕಿ' ಮೂಲಕ ಅಭಿಮಾನಿಗಳನ್ನು ರಂಜಿಸಲು ಮುಂದಾಗಿದ್ದು, ಗೆಲುವಿನ ಓಟದ ಅದೃಷ್ಟದ ಪರೀಕ್ಷೆಯಲ್ಲಿದ್ದಾರೆ. ಬಹುಭಾಷೆಗಳಲ್ಲಿ ರಿಲೀಸ್ ಕಾಣಲಿರುವ 'ಕಲ್ಕಿ 2898 ಎಡಿ' ಚಿತ್ರಕ್ಕೆ ನಟ​ ಪಡೆದ ಸಂಭಾವನೆ 150 ಕೋಟಿ ರೂ. ಎಂಬ ಸುದ್ದಿ ಈ ಹಿಂದೆ ವ್ಯಾಪಕವಾಗಿ ಕೇಳಿಬಂದಿತ್ತು. ಈ ವಿಷಯ ಚಿತ್ರರಂಗದ ವಲಯದಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದ್ರೆ, ಈಗ ಇದು ಸುಳ್ಳು ಎಂಬ ವಿಚಾರ ಹೊರಬಿದ್ದಿದೆ.

ಇತ್ತೀಚಿನ ಸಿನಿ ವರದಿಗಳು ನೀಡಿರುವ ಮಾಹಿತಿ ಪ್ರಕಾರ, ಪ್ರಭಾಸ್​ ಪಡೆದಿದ್ದು 150 ಕೋಟಿ ರೂ. ಅಲ್ಲ. ಬದಲಿಗೆ 80 ಕೋಟಿ ರೂ. ಸಂಭಾವನೆ. ಇದು ನಟನ ಅಭಿಮಾನಿಗಳಿಗೆ ಮತ್ತು ನೆಟ್ಟಿಗರಲ್ಲಿ ಭಾರೀ ಆಶ್ಚರ್ಯ ಮೂಡಿಸಿದೆ. ಸಿನಿಮಾದ ಬಜೆಟ್​ ಗಾತ್ರ ಚಿತ್ರ ತಯಾರಕರ ನಿರೀಕ್ಷೆಗೂ ಮೀರಿದ ಕಾರಣ ತಮ್ಮ ಅಭಿನಯಕ್ಕಾಗಿ ಇಷ್ಟೊಂದು ಹಣ ಬೇಡ ಎಂದು ಸ್ವತಃ ಪ್ರಭಾಸ್​ ನಿರ್ಧರಿಸಿ, 150 ಕೋಟಿಯಲ್ಲಿ 70 ಕೋಟಿ ರೂ. ಸಂಭಾವನೆಯನ್ನು ಕಡಿತಗೊಳಿಸಿದ್ದಾರೆ.

ಪ್ರಭಾಸ್ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಿಸಿದ್ದಾರೆ. ಕೊಂಚ ಆಶ್ಚರ್ಯ ಅನಿಸಿದರೂ ಇದು ನಿಜವೇ. ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಅಂದುಕೊಂಡಂತೆ ಅಬ್ಬರಿಸಿದರೆ, ಅದರಿಂದ ಬಂದ ಲಾಭದ ಹಣದಲ್ಲಿ ಪ್ರಭಾಸ್​ಗೆ ಹಂಚುವ ನಿರ್ಧಾರವನ್ನು ಚಿತ್ರದ ತಯಾರಕರು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ ಸೇರಿದಂತೆ ಮುಂತಾದವರ ತಾರಾಗಣವಿದೆ. ವೈಜಯಂತಿ ಮೂವೀಸ್ ಅಡಿಯಲ್ಲಿ ಅಶ್ವಿನಿ ದತ್ ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net