

Kaveri Kapur: ನಟಿ ಕಾವೇರಿ ಕಪೂರ್ ತಮ್ಮ ಪೋಷಕರ ವಿಚ್ಛೇದನದಿಂದ ನಾನು ಸಂತೋಷವಾಯ್ತು ಎಂದು ನೀಡಿರುವ ಹೇಳಿಕೆ ಸದ್ಯ ಹಲವರ ಟೀಕೆ ಮತ್ತು ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಕುರಿತಂತೆ ಮನಬಿಚ್ಚಿ, ಮುಕ್ತವಾಗಿ ತನ್ನ ಹೇಳಿಕೆಯನ್ನು ವಿವರಿಸಿರುವ ನಟಿ, ಇದು ಕಹಿ ಅನಿಸಿದರೂ ನಿಜವೇ. ನನ್ನ ಅಪ್ಪ-ಅಮ್ಮ ದಾಂಪತ್ಯ ಜೀವನವನ್ನು ಮುರಿದುಕೊಂಡಿದ್ದು ಅಂದು ನನಗೆ ಒಳ್ಳಿತಾಯಿತು ಎಂದಿದ್ದಾರೆ.
"ಮನೆಯಲ್ಲಿ ನಿತ್ಯವೂ ಅಪ್ಪ-ಅಮ್ಮನ ಜಗಳಗಳಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಇದು ನನ್ನ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮವೂ ಬೀರಿತ್ತು" ಎಂದು ನಟಿ ಕಾವೇರಿ ಕಪೂರ್ ಹೇಳಿದ್ದಾರೆ. ನಿರ್ದೇಶಕ ಶೇಖರ್ ಕಪೂರ್ ಮತ್ತು ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಅವರ ಪುತ್ರಿಯಾದ ಕಾವೇರಿ, ಬಾಲಿವುಡ್ನ 'ಬಾಬಿ ಔರ್ ರಿಷಿ ಲವ್ ಸ್ಟೋರಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ಕಲಾವಿದೆ. ತನ್ನ ಸಿನಿಮಾ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡ ನಟಿ, ಪೋಷಕರ ವಿಚ್ಛೇದನ ವಿಚಾರಕ್ಕೆ ಸಂಬಂಧಿಸಿದಂತೆ ಕಡೆಗೂ ಮೌನ ಮುರಿದಿದ್ದಾರೆ.
"ನನ್ನ ಪೋಷಕರು ಡಿವೋರ್ಸ್ ಪಡೆದಾಗ ನಾನು ಅಂಥಾ ದುಃಖಕ್ಕೇನು ಒಳಗಾಗಿರಲಿಲ್ಲ. ಬದಲಿಗೆ ನೆಮ್ಮದಿಯ ನಿಟ್ಟುಸಿರು, ಸಂತಸ ಉಂಟಾಗಿತ್ತು. ಆದರೆ ನಂತರದಲ್ಲಿ ಇದರ ವ್ಯತ್ಯಾಸವನ್ನು ನಾನು ಗಮನಿಸಿದೆ. ದಿನ ಕಳೆದಂತೆ ನನ್ನ ಪೋಷಕರ ವಿಚ್ಛೇದನ ನನ್ನ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲು ಪ್ರಾರಂಭಿಸಿತು. ನನಗೆ ವಯಸ್ಸಾದಂತೆ, ಇದು ನನ್ನನ್ನು ಮಾನಸಿಕವಾಗಿಯೂ ಕುಗ್ಗಿಸುತ್ತ ಹೋಯಿತು" ಎಂದು ಹೇಳಿದ್ದಾರೆ.
"ಇಂದಿಗೂ ನಾನು ಮಾನಸಿಕವಾಗಿ ಕಷ್ಟಪಡುತ್ತಿದ್ದೇನೆ. ಇದರೊಂದಿಗೆ ನನಗೆ ಒಸಿಡಿ (ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್) ಸಮಸ್ಯೆಯೂ ಇದೆ. ಇದೆಲ್ಲದರಿಂದ ನಾನು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸ್ವಲ್ಪ ಸಮಯದ ಅಗತ್ಯವಿದೆ" ಎಂದು ನಾನು ಭಾವಿಸುತ್ತೇನೆ ಎಂದು ಕಾವೇರಿ ತಮ್ಮ ಮನದ ಮಾತನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಶೇಖರ್ ಕಪೂರ್ ಮತ್ತು ಸುಚಿತ್ರಾ ಕೃಷ್ಣಮೂರ್ತಿ 1999ರಲ್ಲಿ ವಿವಾಹವಾದರು. ಈ ಜೋಡಿಗೆ 2001ರಲ್ಲಿ ಕಾವೇರಿ ಎಂಬ ಮಗಳು ಜನಿಸಿದಳು. ವೈವಾಹಿಕ ಜೀವನದಲ್ಲಿ ಆದ ಕೆಲವು ತೊಂದರೆಗಳಿಂದ 2007ರಲ್ಲಿ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದರು,(ಏಜೆನ್ಸೀಸ್).