

ನವದೆಹಲಿ: 'ವಂಡರ್ ವುಮನ್' ಖ್ಯಾತಿಯ ಗಾಲ್ ಗಡೋಟ್ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಅವರು ರಿವೀಲ್ ಮಾಡಿದ ಮೇಲೆ ಎಲ್ಲರಿಗೂ ಆಶ್ಚರ್ಯವಾಯಿತು. 38 ವರ್ಷದ ಗಾಲ್ ಗಡೋಟ್ ಮಾರ್ಚ್ 6 ರಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಸ್ಪತ್ರೆಯಲ್ಲಿ ನವಜಾತ ಶಿಶುವಿನೊಂದಿಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಪ್ರೆಗ್ನೆನ್ಸಿ ಅಷ್ಟು ಸುಲಭವಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ಗಡೋಟ್ ಅವರ ಈ ಹೇಳಿಕೆ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟುಮಾಡುತ್ತಿದೆ. ತಮ್ಮ ನವಜಾತ ಶಿಶುವನ್ನು ಮುದ್ದಾಡುತ್ತಿರುವ, ಆಸ್ಪತ್ರೆಯ ಬೆಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಫೋಟೋವನ್ನು ಗಡೋಟ್ ಹಂಚಿಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭಾಷಯಗಳನ್ನು ತಿಳಿಸುತ್ತಿದ್ದಾರೆ.
ಗಾಲ್ ಗಡೋಟ್ ಜರೋನ್ ವರ್ಸಾನೊ ಅವರನ್ನು 2008 ರಲ್ಲಿ ವಿವಾಹವಾದರು. ತಮ್ಮ ಮೊದಲ ಮಗಳು ಅಲ್ಮಾ ಅವರನ್ನು 2011 ರಲ್ಲಿ ಸ್ವಾಗತಿಸಿದರು. ನಂತರ ಅವರ ಎರಡನೇ ಮಗಳು ಮಾಯಾ 2017ರಲ್ಲಿ ಜನಿಸಿದರೆ, ಮೂರನೇ ಮಗಳು ಡೇನಿಯೆಲ್ಲಾಗೆ 2021ರಲ್ಲಿ ಜನ್ಮ ನೀಡಿದರು. ದಿ ಹಾಲಿವುಡ್ ರಿಪೋರ್ಟರ್ ಜೊತೆಗಿನ ಹಿಂದಿನ ಸಂದರ್ಶನದಲ್ಲಿ ಗಾಲ್ ಗಡೋಟ್ ಅವರು "ಹೆರಿಗೆಯನ್ನು ಇಷ್ಟಪಡುವುದಾಗಿ" ತಿಳಿಸಿದ್ದರು.
ಕೊನೆಯದಾಗಿ ಗಾಲ್ ಗಡೋಟ್ ನೆಟ್‌ಫ್ಲಿಕ್ಸ್‌ನ ಸ್ಪೈ ಆಕ್ಷನ್ ಥ್ರಿಲ್ಲರ್ ಹಾರ್ಟ್ ಆಫ್ ಸ್ಟೋನ್ (2023) ನಲ್ಲಿ ರಾಚೆಲ್ ಸ್ಟೋನ್ ಆಗಿ ಕಾಣಿಸಿಕೊಂಡರು. ಅವರು ಪ್ರಸ್ತುತ ಡಿಸ್ನಿಯ ಸ್ನೋ ವೈಟ್‌ನಲ್ಲಿ ಇವಿಲ್ ಕ್ವೀನ್ ಪಾತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ. ಇದು 2025 ರಲ್ಲಿ ಬಿಡುಗಡೆಯಾಗಲಿದೆ.