‘ಗೀಕ್’ ಚಿತ್ರದ ವಿಭಿನ್ನ ಪಾತ್ರದಲ್ಲಿ ಸಕಲೇಶಪುರ ಮೂಲದ ನಟಿ ವಿರಾನಿಕಾ ಶೆಟ್ಟಿ

ವಿರಾನಿಕಾ ಶೆಟ್ಟಿ
ವಿರಾನಿಕಾ ಶೆಟ್ಟಿ
Published on

ಪ್ರಮುಖ ಮುಖ್ಯಾಂಶಗಳು

  • ಸೈಬರ್ ಕ್ರೈಂ ಹಿನ್ನೆಲೆಯ ಸಿನಿಮಾದಲ್ಲಿ ವಿರಾನಿಕಾ
  • ಗೀಕ್ ಜತೆಗೆ ಮತ್ತೊಂದು ಕನ್ನಡ ಚಿತ್ರದ ಶೂಟಿಂಗ್ ಮುಗಿಸಿದ ನಟಿ
  • ನಟಿಯ ಈ ವರ್ಷ ಎರಡು ಸಿನಿಮಾಗಳು ರಿಲೀಸ್ ಗೆ ಸಿದ್ಧ
ಬೆಂಗಳೂರು: ಕಳೆದ ವರ್ಷ ನಟಿ ವಿರಾನಿಕಾ ಶೆಟ್ಟಿ ಅಭಿನಯದ ‘ಗ್ಯಾಂಗ್‌ಸ್ಟರ್ ಅಲ್ಲ, ಫ್ರಾಂಕ್‌ಸ್ಟರ್’, ‘ಓ ಶಿವಂ’, ‘ಧರ್ಮಂ’ ಸೇರಿ ಮೂರು ಸಿನಿಮಾಗಳು ರಿಲೀಸ್ ಆಗಿದ್ದವು. ಈ ಚಿತ್ರಗಳು ನಟಿಗೆ ತಕ್ಕಮಟ್ಟಿಗೆ ಹೆಸರು ತಂದುಕೊಟ್ಟರೂ, ಪಾತ್ರಗಳು ಒಂದೇ ರೀತಿಯಲ್ಲಿದ್ದವು. ಹಾಗಾಗಿ, ಮುಂದಿನ ಚಿತ್ರದಲ್ಲಿ ಬೇರೆ ರೀತಿ ಕಾಣಿಸಿಕೊಳ್ಳಬೇಕು ಎಂಬ ನಟಿಯ ಆಸೆಗೆ ವೇದಿಕೆಯಾಗಿದ್ದೇ ‘ಗೀಕ್’ ಚಿತ್ರ. ಡಿ. ಹರಿಪ್ರಕಾಶ್ ನಿರ್ದೇಶನದ ಸೈಬರ್ ಕ್ರೈಂ ಸುತ್ತ ಸಾಗುವ ಈ ಚಿತ್ರದಲ್ಲಿ ಕಿರಣ್ ಶ್ರೀನಿವಾಸ್‌ಗೆ ವಿರಾನಿಕಾ ಜೋಡಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ಜರ್ನಿ ಕುರಿತು ವಿರಾನಿಕಾ ಶೆಟ್ಟಿ ಮಾತಿಗಿಳಿದರು. ‘ಈ ಹಿಂದಿನ ಬಹುತೇಕ ಚಿತ್ರಗಳಲ್ಲಿ ಹಳ್ಳಿ ಹುಡುಗಿಯಾಗಿಯೇ ಕಾಣಿಸಿಕೊಂಡಿದ್ದೇನೆ. ಆ ಪಾತ್ರ ರಿಪೀಟ್ ಆಗುತ್ತಿತ್ತು. ಬೇರೆ ರೀತಿಯ ಪಾತ್ರ ಬೇಕು ಎನ್ನುವಾಗಲೇ ನನಗೆ ‘ಗೀಕ್’ ತಂಡ ಸಂಪರ್ಕಕ್ಕೆ ಬಂತು. ಸ್ಟೋರಿ ಕೇಳುವಾಗಲೇ ಈವರೆಗೂ ನಾನು ನಿರ್ವಹಿಸದ ಪಾತ್ರ ಅನಿಸಿತು. ಅಷ್ಟು ಚೆನ್ನಾಗಿ ಪಾತ್ರ ಡಿಸೈನ್ ಮಾಡಿದ್ದರು. ಸಾಕಷ್ಟು ಅಧ್ಯಯನ ನಡೆಸಿರುವುದು ಗೊತ್ತಾಗುತ್ತದೆ. ಹಾಗಾಗಿ, ಪಾತ್ರ ಒಪ್ಪಿಕೊಂಡೆ. ‘ಗೀಕ್’ ಸೈಬರ್ ಅಪರಾಧಗಳ ಸುತ್ತ ಸಾಗುವ ಸಿನಿಮಾ. ಸೈಬರ್ ಕ್ರೈಂನಿಂದ ಹೆಣ್ಣುಮಕ್ಕಳು ಯಾವೆಲ್ಲ ರೀತಿಯಾಗಿ ಮೋಸ ಹೋಗುತ್ತಾರೆ ಎಂಬುದನ್ನು ತೋರಿಸಲಾಗಿದೆ. ಸಸ್ಪೆನ್ಸ್ ಜತೆಗೆ ಕ್ಯೂಟ್ ಲವ್‌ಸ್ಟೋರಿ ಕೂಡ ಇದೆ. ಕಮರ್ಷಿಯಲ್ ಚಿತ್ರಕ್ಕೆ ಬೇಕಿರುವ ಎಲ್ಲ ಎಲಿಮೆಂಟ್‌ಗಳ ಅಂತಿಮವಾಗಿ ಒಂದು ಸಂದೇಶವಿದೆ. ಪಾತ್ರಕ್ಕಾಗಿ ಕೆಲ ದಿನ ವರ್ಕ್‌ಶಾಪ್ ಕೂಡ ಮಾಡಿದ್ದೇವೆ’ ಎನ್ನುತ್ತಾರೆ ವಿರಾನಿಕಾ.

ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದೇನೆ

ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾಗಿದ್ದೇನೆ ಎನ್ನುವ ವಿರಾನಿಕಾ, ‘ಸಿನಿಮಾದಿಂದ ಸಿನಿಮಾಕ್ಕೆ ವಿಭಿನ್ನ ಪ್ರಯತ್ನ ಇರಬೇಕು ಎಂದು ನಂಬಿದವಳು. ಹಾಗಾಗಿ, ನಾನೀಗ ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾಗಿದ್ದೇನೆ. ಬಂದ ಎಲ್ಲವನ್ನು ಒಪ್ಪಿಕೊಳ್ಳುತ್ತಿಲ್ಲ. ಪಾತ್ರಕ್ಕೆ ಸ್ಪೇಶ್, ಮೌಲ್ಯದ ಜತೆಗೆ ಟೆಕ್ನಿಕಲ್ ಆಗಿ ಚೆನ್ನಾಗಿದ್ದಾಗ ಮಾತ್ರ ಒಪ್ಪುತ್ತಿದ್ದೇನೆ. ‘ಗೀಕ್’ ಜತೆಗೆ ಮತ್ತೊಂದು ಕನ್ನಡ ಚಿತ್ರದ ಚಿತ್ರೀಕರಣ ಮುಗಿಸಿದ್ದು, ಸದ್ಯದಲ್ಲೇ ಘೋಷಣೆಯಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net