

ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡುತ್ತಿದೆ. ಡ್ರಗ್ಸ್ ಮಾಫಿಯಾ ಕುರಿತ ಚಿತ್ರ ಇದಾಗಿದ್ದು, ಬೆಂಗಳೂರಿನ ಹೊರವಲಯದಲ್ಲಿ ಅದ್ದೂರಿ ಸೆಟ್‌ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮುಂದಿನ ವರ್ಷದ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡವು ಘೋಷಣೆ ಮಾಡಿದೆ. ಚಿತ್ರದಲ್ಲಿ ಬಹುತಾರಾಗಣವಿದ್ದು, ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಯಶ್‌ಗೆ ನಾಯಕಿಯಾಗಿದ್ದಾರೆ. ಯಶ್ ಅಕ್ಕನ ಪಾತ್ರದಲ್ಲಿ ನಯನತಾರಾ ನಟಿಸಲಿದ್ದು, ಶ್ರುತಿ ಹಾಸನ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಅದರ ನಡುವೆಯೇ ಯಶ್‌ಗೆ ಎರಡನೇ ನಾಯಕಿಯಾಗಿ ‘ಸ್ಟೂಡೆಂಟ್ ಆ್ ದ ಇಯರ್-2’, ‘ತಡಪ್’, ‘ಏಕ್ ವಿಲನ್ ರಿಟರ್ನ್ಸ್’ನಲ್ಲಿ ಅಭಿನಯಿಸಿದ್ದ ತಾರಾ ಸುತಾರಿಯಾ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಆದರೆ, ಇದೀಗ ಈ ಬಗ್ಗೆ ಖುದ್ದು ತಾರಾ ಸ್ಪಷ್ಟನೆ ನೀಡಿದ್ದಾರೆ. ‘ಕಳೆದ ಹಲವು ದಿನಗಳಿಂದ ನನ್ನ ಕುರಿತು ಹರಡಿರುವ ಸುದ್ದಿ ಸುಳ್ಳಾಗಿದ್ದು, ಇದನ್ನು ನಾನು ಎಲ್ಲಿಯೂ ಹಂಚಿಕೊಂಡಿಲ್ಲ. ಒಂದು ವೇಳೆ ಈ ಬಗ್ಗೆ ತಿಳಿಸಬೇಕು ಎಂದೆನಿಸಿದರೆ ನಾನೇ ಮಾಹಿತಿ ನೀಡುತ್ತೇನೆ. ಇಲ್ಲಿ ಯಾರೂ ಯಾರಿಗೂ ಎರಡನೇಯವರಲ್ಲ’ ಎಂದು ಬರೆದುಕೊಂಡಿದ್ದಾರೆ.- ಏಜೆನ್ಸೀಸ್