ನವರಂಗಿ ಸೋನಲ್: ಒಂಬತ್ತು ಚಿತ್ರಗಳಲ್ಲಿ ಭಿನ್ನ ಪಾತ್ರಗಳಲ್ಲಿ ‘ಬನಾರಸ್’ ಬೆಡಗಿ

Sonal
Published on
ಕಳೆದ ವರ್ಷ ಪ್ಯಾನ್ ಇಂಡಿಯಾ ‘ಬನಾರಸ್’ ಚಿತ್ರದಲ್ಲಿ ಮಿಂಚಿದ್ದ ನಟಿ ಸೋನಲ್ ಮೊಂಟೇರೊ, ಇದೀಗ ಒಂಬತ್ತು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವುಗಳಲ್ಲಿ ಮೂರು ಸಿನಿಮಾಗಳು ಬಿಡುಗಡೆಗೆ ರೆಡಿಯಿವೆ. ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’, ಡಾರ್ಲಿಂಗ್ ಕೃಷ್ಣ ನಾಯಕನಾಗಿರುವ ‘ಶುಗರ್ ಫ್ಯಾಕ್ಟರಿ’ ಹಾಗೂ ತನುಷ್ ಶಿವಣ್ಣಗೆ ನಾಯಕಿಯಾಗಿ ‘ನಟ್ವರ್​ಲಾಲ್’ ಚಿತ್ರದಲ್ಲಿ ಸೋನಲ್ ಮಿಂಚಿದ್ದು, ತೆರೆಗೆ ಬರಲು ರೆಡಿ ಇವೆ.

ಭಿನ್ನ, ವಿಭಿನ್ನ ಪಾತ್ರಗಳು

ಒಂಬತ್ತು ಚಿತ್ರಗಳಲ್ಲೂ ಸೋನಲ್ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚಲಿದ್ದಾರೆ. ‘‘ಶುಗರ್ ಫ್ಯಾಕ್ಟರಿ’ ಇಡೀ ಸಿನಿಮಾದಲ್ಲಿ ಬಿಯರ್ ಬಾಟಲ್ ಕೊಟ್ಟಿದ್ದಾರೆ. ಅದಿತಿ ಬೋಪಣ್ಣ ಎಂಬ ಕೊಡಗಿನ ಪಾರ್ಟಿಪ್ರಿಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ವಿನೋದ್ ಪ್ರಭಾಕರ್ ಸರ್ ನಾಯಕನಾಗಿರುವ ‘ಮಾದೇವ’ ಚಿತ್ರದಲ್ಲಿ ಲಂಗ ದಾವಣಿಯಲ್ಲಿ ಹಳ್ಳಿ ಹುಡುಗಿಯಾಗಿದ್ದೇನೆ. ಕೆಲವು ದಿನಗಳ ಹಿಂದಷ್ಟೇ ಸೆಟ್ಟೇರಿದ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಚಿತ್ರದಲ್ಲಿ ಮೊದಲ ಬಾರಿಗೆ ನೆಗಟಿವ್ ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಜತೆಗೆ ‘ತಲ್ವಾರ್​ಪೇಟೆ’ ಚಿತ್ರದ ಚಿತ್ರೀಕರಣ ಕೂಡ ಪೂರ್ಣಗೊಳ್ಳ ಬೇಕಿದೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಸೋನಲ್.

ಬುದ್ಧಿವಂತನ ಜತೆ ಬುದ್ಧಿವಂತೆ

ಉಪೇಂದ್ರ ನಾಯಕನಾಗಿರುವ ‘ಬುದ್ಧಿವಂತ 2’ ಚಿತ್ರದ ನಾಯಕಿಯಾಗಿರುವ ಸೋನಲ್, ‘ಉಪೇಂದ್ರ ಅವರಿಂದ ಕಲಿಯುವುದು ತುಂಬ ಇದೆ. ಹೀಗಾಗಿಯೇ ನಾನು ಚಿತ್ರೀಕರಣದ ಬ್ರೇಕ್​ನಲ್ಲಿ ಕ್ಯಾರಾವಾನ್​ಗೆ ಹೋಗುತ್ತಿರಲಿಲ್ಲ. ಅವರ ಜತೆ ಕುಳಿತುಬಿಡುತ್ತಿದ್ದೆ. ರಾಜಕಾರಣ, ಸಿನಿಮಾ ಬಗ್ಗೆ ತುಂಬ ಮಾತನಾಡುತ್ತಿದ್ದೆವು. ಅವರಿಂದ ಹಲವು ವಿಷಯಗಳನ್ನು ಕಲಿತೆ’ ಎನ್ನುತ್ತಾರೆ.

ಮೊದಲ ಬಯೋಪಿಕ್ ಸಂಭ್ರಮ

ಸ್ವಾತಂತ್ರ್ಯ ಹೋರಾಟಗಾರ್ತಿ ‘ನೈಟಿಂಗೇಲ್ ಆಫ್ ಇಂಡಿಯಾ’ ಹೆಗ್ಗಳಿಕೆಯ ಸರೋಜಿನಿ ನಾಯ್ಡು ಜೀವನಾಧಾರಿತ ಚಿತ್ರದಲ್ಲೂ ಸೋನಲ್ ಮೊಂಟೇರೊ ನಟಿಸುತ್ತಿದ್ದಾರೆ. ‘ಬಯೋಪಿಕ್​ಗಳು ಚಾಲೆಂಜಿಂಗ್ ಆಗಿರುತ್ತವೆ. ನಾನು ಚಿತ್ರಕ್ಕೆ ಆಯ್ಕೆಯಾಗಿದ್ದು ಸಹ ಸರಳವಾಗಿರಲಿಲ್ಲ. ನಾಲ್ಕೈದು ಟೆಸ್ಟ್ ಶೂಟ್​ಗಳನ್ನು ಮಾಡಿ, ನಂತರ ಆಯ್ಕೆ ಮಾಡಿಕೊಂಡರು. ನಾನಿಲ್ಲಿ ಮೂರು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಶೇಕಡಾ 30ರಷ್ಟು ಚಿತ್ರೀಕರಣವಾಗಿದೆ. ಗ್ರೀಸ್, ಲಂಡನ್​ನಲ್ಲಿ ಚಿತ್ರೀಕರಣ ಮಾಡುವ ಪ್ಲಾ್ಯನ್ ಇದೆ. ಅವರ ಬಗ್ಗೆ ಚಿತ್ರತಂಡದವರು ಸಾಕಷ್ಟು ಮಾಹಿತಿ ಕಲೆಹಾಕಿದ್ದರು. ಅದನ್ನೆಲ್ಲ ಓದಿಕೊಂಡೆ, ಜತೆಗೆ ಅವರ ಕೆಲವು ವಿಡಿಯೋಗಳನ್ನು ನೋಡಿ ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡೆ’ ಎನ್ನುತ್ತಾರೆ.

ಒತ್ತಡದಲ್ಲೂ ಖುಷಿ ಇದೆ...

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಿದ್ದರೂ, ಆ ಒತ್ತಡವನ್ನೂ ಸೋನಲ್ ಎಂಜಾಯ್ ಮಾಡುತ್ತಿದ್ದಾರಂತೆ. ‘ಕೆಲವೊಮ್ಮೆ ಕಷ್ಟವಾಗುತ್ತದೆ. ಬೆಳಗ್ಗೆಯಿಂದ ಸಂಜೆವರೆಗೂ ‘ಮಾದೇವ’ ಚಿತ್ರದ ಚಿತ್ರೀಕರಣ ಬಳಿಕ ರಾತ್ರಿ ‘ಗರಡಿ’ ಶೂಟಿಂಗ್​ನಲ್ಲಿ ಭಾಗಿಯಾಗುತ್ತಿದ್ದೆ. ಆದರೆ, ಆ ಒತ್ತಡವನ್ನೂ ಎಂಜಾಯ್ ಮಾಡುತ್ತೇನೆ. ನಾವು ಮಾಡುವ ಕೆಲಸವನ್ನು ಇಷ್ಟಪಟ್ಟು ಮಾಡಿದರೆ, ಕಷ್ಟವೂ ಖುಷಿ ನೀಡುತ್ತದೆ’ ಎನ್ನುವ ಸೋನಲ್, ‘ನನಗೆ ನನ್ನ ಪಾತ್ರ ಮುಖ್ಯ. ಸ್ವಲ್ಪ ವರ್ಷಗಳ ಬಳಿಕ ನಾನು ಈ ರೀತಿಯ ಪಾತ್ರ ಮಾಡಿಲ್ಲವಲ್ಲಾ ಅಂತ ಬೇಸರ ಮಾಡಿಕೊಳ್ಳಬಾರದು. ಹೀಗಾಗಿಯೇ ಎಲ್ಲ ರೀತಿಯ ಪಾತ್ರಗಳಲ್ಲೂ ನಟಿಸುತ್ತಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net