ರಿಯಲ್ ಸಾತ್ವಿಕಾ ವರ್ಸಸ್ ರೀಲ್ ಸಾತ್ವಿಕಾ!: ಸಿಂಪಲ್ ಸುನಿಯ ತ್ರಿಕೋನ ಪ್ರೇಮಕಥೆಯಲ್ಲಿ ‘ರೋಸ್’ ನಟಿಯ ವಿಭಿನ್ನ ರಾಗ

ಸಾತ್ವಿಕಾ ರಾವ್​
ಸಾತ್ವಿಕಾ ರಾವ್​
Published on

ಪ್ರಮುಖ ಮುಖ್ಯಾಂಶಗಳು

  • ಮೋಡ ಕವಿದ ವಾತಾವರಣ ಸಿನಿಮಾ ನಾಳೆ ರಿಲೀಸ್
  • ಚಿತ್ರದಲ್ಲೂ ಸಾತ್ವಿಕಾ ಹೆಸರಿನ ಪಾತ್ರದಲ್ಲಿ ನಟಿ
  • ಗೆಲುವಿನ ಭರವಸೆಯಲ್ಲಿ ರೋಸ್ ನಟಿ
ಬೆಂಗಳೂರು: ಶ್ರಾವ್ಯಾ ರಾವ್ ಹೆಸರಿನಿಂದ ಗುರುತಿಸಿಕೊಂಡಿದ್ದ ಕನ್ನಡದ ‘ರೋಸ್’ ನಟಿ ಇದೀಗ ಸಾತ್ವಿಕಾ ರಾವ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ನಟ ಕಿಚ್ಚ ಸುದೀಪ್ ಮಾರ್ಗದರ್ಶನದ ಮೇರೆಗೆ ಹೆಸರು ಬದಲಿಸಿಕೊಂಡ ಬಳಿಕ ನಟಿಯ ಬದುಕೇ ಬದಲಾಗಿದ್ದು, ಕನ್ನಡ ಸೇರಿ ಪರಭಾಷೆಯಲ್ಲೂ ಬಿಜಿಯಾಗಿದ್ದಾರೆ. ಇದೀಗ ಸಿಂಪಲ್ ಸುನಿ ನಿರ್ದೇಶನದ ಕನ್ನಡದ ‘ಮೋಡ ಕವಿದ ವಾತಾವರಣ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನಾಳೆ (ಜೂ. 26) ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾತ್ರ ಮತ್ತು ಸಿನಿಮಾ ಜರ್ನಿ ಕುರಿತು ಸಾತ್ವಿಕಾ, ‘‘ಮೋಡ ಕವಿದ ವಾತಾವರಣ’ ಚಿತ್ರಕ್ಕೆ ಮೊದಲು ಬೇರೊಬ್ಬ ನಟಿಯನ್ನು ಆಯ್ಕೆ ಮಾಡಲಾಗಿತ್ತು. ಶೂಟಿಂಗ್ ತೆರಳುವ ಹಿಂದಿನ ದಿನವೇ ಅವರು ಸಿನಿಮಾದಿಂದ ಹಿಂದೆ ಸರಿದರು. ಆಗ ಚಿತ್ರದಲ್ಲಿ ನನಗೆ ಅವಕಾಶ ಸಿಕ್ಕಿತು. ಫೋನ್‌ನಲ್ಲಿಯೇ ಕಥೆ ಕೇಳಿದೆ. ಇಷ್ಟವಾದ ಕಾರಣ ಒಪ್ಪಿಕೊಂಡು ಮರುದಿನವೇ ಶೂಟಿಂಗ್‌ನಲ್ಲಿ ಭಾಗವಹಿಸಿದೆ. ಸುಮಾರು 40 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ಇಲ್ಲಿ ನನ್ನದೇ ಹೆಸರಿನ ಪಾತ್ರದಲ್ಲಿ ನಾನು ನಟಿಸಿದ್ದೇನೆ. ವಾಸ್ತವವಾಗಿ ನಾನು ಇರುವುದಕ್ಕೂ ಆ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ‘ಮೋಡ ಕವಿದ ...’ ಸಾತ್ವಿಕಾ ತರ ನಿಜ ಜೀವನದ ಸಾತ್ವಿಕಾ ಖಂಡಿತ ಇಲ್ಲ. ಹಾಗಾಗಿ, ಆ ಪಾತ್ರಕ್ಕೆ ನಾನು ಒಗ್ಗಿಕೊಳ್ಳಬೇಕಿತ್ತು. ಮೊದಲು ಗೊಂದಲವಿದ್ದರೂ, ಕೊನೆಗೆ ಸುಮಾರು 60ಕ್ಕೂ ಹೆಚ್ಚು ದಿನ ವರ್ಕ್‌ಶಾಪ್ ಮಾಡಿದೆವು. ಸುನಿ ಸರ್ ಇಲ್ಲಿ ಪ್ರೇಮದ ವಿವಿಧ ಆಯಾಮಗಳನ್ನು ತಾಜಾತನದಿಂದ ಕಟ್ಟಿಕೊಡುತ್ತಿದ್ದಾರೆ. ಪ್ರೀತಿ ಎಂಬ ಎರಡು ಅಕ್ಷರದ ಪದದಲ್ಲಿ ತುಂಬ ವಿಚಾರಗಳಿವೆ. ತ್ಯಾಗ, ಕಾಳಜಿ, ಗೊಂದಲ, ಅಪಸ್ವರ.. ಹೀಗೆ ಹಲವು ಅಂಶಗಳನ್ನು ಆಪ್ತವಾಗುವಂತೆ ಇಲ್ಲಿ ಹೇಳಿದ್ದಾರೆ. ಈಗಾಗಲೇ ಸಿಂಗಾಪೂರ್‌ನಲ್ಲಿ ನಮ್ಮ ಚಿತ್ರದ ಪ್ರೀಮಿಯರ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದೇ ರೀತಿ ರಾಜ್ಯದಲ್ಲೂ ಸಿನಿಮಾ ಸಕ್ಸಸ್ ಆಗುವ ಭರವಸೆಯಿದೆ’ ಎಂದು ಸಾತ್ವಿಕಾ ಖುಷಿ ಹಂಚಿಕೊಳ್ಳುತ್ತಾರೆ.

ಕಾಲಿಗೆ ಪೆಟ್ಟು

ಪಾತ್ರದ ಸವಾಲು, ಸಿದ್ಧತೆ ಕುರಿತು ಸಾತ್ವಿಕಾ, ‘ಆಕಸ್ಮಿಕವಾಗಿ ಈ ಪಾತ್ರ ಸಿಕ್ಕಿದ್ದರಿಂದ ಹೆಚ್ಚು ಹೋಮ್‌ವರ್ಕ್ ಮಾಡಬೇಕಿತ್ತು. ಶೂಟಿಂಗ್ ಸ್ಥಳದಲ್ಲಿಯೇ ಕೆಲವೊಮ್ಮೆ ಸ್ಕ್ರಿಪ್ಟ್, ಡೈಲಾಗ್ ಬದಲಾಗಿಬಿಡುತ್ತಿತ್ತು. ಅದಕ್ಕೆ ಅಷ್ಟೇ ಸಿದ್ಧತೆ ಬೇಕಾಗುತ್ತಿತ್ತು. ಒಂದು ಹಾಡಿಗಾಗಿ ನಾನು ಮತ್ತು ನಾಯಕ ಶೀಲಂ ಹಗ್ಗ ಕಟ್ಟಿಕೊಂಡು ಏರಿಯಲ್ ಡಾನ್ಸ್ ಮಾಡಬೇಕಿತ್ತು. ಆ ಸಮಯದಲ್ಲಿ ನಾನು 8-10 ಅಡಿ ಎತ್ತರದಿಂದ ಹಗ್ಗ ಜಾರಿ ಬಿದ್ದು, ಕಾಲಿಗೆ ಪೆಟ್ಟು ಮಾಡಿಕೊಂಡು ತಿಂಗಳುಗಳ ಕಾಲ ವಿಶ್ರಾಂತಿಯಲ್ಲಿದ್ದೆ. ಈಗ ಸಂಪೂರ್ಣ ಗುಣಮುಖಳಾಗಿದ್ದೇನೆ’ ಎನ್ನುವ ಸಾತ್ವಿಕಾ ಸದ್ಯ ಎರಡು-ಮೂರು ಕಥೆಗಳನ್ನು ಕೇಳಿದ್ದು, ರೊಮ್ಯಾಂಟಿಕ್ ಕಾಮಿಡಿ ಇಲ್ಲವೇ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುವ ಅಭಿಲಾಷೆ ವ್ಯಕ್ತಪಡಿಸುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net