

ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಉದ್ಯಮಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, ನಟಿ ಸಂಜನಾ ಗಲ್ರಾನಿ ಮತ್ತು ಆದಿತ್ಯ ಅಗರ್ವಾಲ್ ವಿರುದ್ಧ ಸಿಸಿಬಿ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ.
2020ರ ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದ್ದ ಈ ಪ್ರಕರಣದಲ್ಲಿ ಉದ್ಯಮಿಗಳು ಸೇರಿ ಜನಪ್ರಿಯ ಸೆಲೆಬ್ರಿಟಿಗಳು ಭಾಗಿಯಾಗಿ, ಹಲವರು ಬಂಧಿತರಾಗಿದ್ದರು. 3 ವರ್ಷದ ನಂತರ ಪ್ರಮುಖ ಆರೋಪಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ.
ವಿಚಾರಣೆ ವೇಳೆ ಶಿವಪ್ರಕಾಶ್ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಅಮರ್ ಕೊರೆಯಾ, ಅರ್ಜಿದಾರರ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ಐಆರ್ ಕಾನೂನುಬಾಹಿರ ಮತ್ತು ದೋಷಪೂರಿತವಾಗಿದೆ. ಏಕೆಂದರೆ ದೂರಿನಲ್ಲಿ ಶಿವಪ್ರಕಾಶ್ ವಿರುದ್ಧ ಗುರುತರವಾದ ಆರೋಪಗಳಿಗೆ ಸಾಕ್ಷ್ಯಧಾರಗಳು ಇಲ್ಲ.
ಹಾಗಾಗಿ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಆರೋಪಪಟ್ಟಿಯು ಸಂಪೂರ್ಣ ಕಾನೂನು ಬಾಹಿರ ಎಂದು ವಾದ ಮಂಡಿಸಿದರು. ಅಲ್ಲದೆ ದೋಷಾರೋಪಣಾ ಪಟ್ಟಿಯಲ್ಲಿಯೂ ಸಹ ಯಾವುದೇ ವಸ್ತು ಪುರಾವೆ ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ. ಸಹಕಾರದ ಹೊರತಾಗಿಯೂ ತನ್ನ ಕಕ್ಷಿದಾರನನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಲಾಗಿಲ್ಲ ಹಾಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ವಾದ ಮಂಡಿಸಿದ್ದರು. ವಾದ ಪ್ರತಿ ಆಲಿಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.