ಸ್ಪೆಷಲ್ ಸಾಂಗ್​ನಲ್ಲಿ ರಶ್ಮಿಕಾ?; ರಷ್ಯಾದಲ್ಲೂ ಪ್ರಚಾರ..

Rashmika
Published on

ಬೆಂಗಳೂರು: ತೆಲುಗು ನಟ ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಮಹೇಶ್ ಬಾಬು ನಾಯಕನಾಗಿರುವ 28ನೇ ಚಿತ್ರವಿದು. ಸದ್ಯಕ್ಕಿನ್ನೂ ಟೈಟಲ್ ಅಂತಿಮವಾಗಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವ ಉದ್ದೇಶದಿಂದ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಮಿಂಚಿರುವ ಪೂಜಾ ಹೆಗ್ಡೆಯನ್ನು ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಬಾಲಿವುಡ್ ನಟ ವಿಕ್ಕಿ ಕೌಶಲ್ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ.

ಆ ನಡುವೆಯೇ ಚಿತ್ರತಂಡ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ರೂಪಿಸಲು ಮುಂದಾಗಿದೆ. ಹೀಗಾಗಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರದ ಸ್ಪೆಷಲ್ ಸಾಂಗ್​ಗಾಗಿ ರಶ್ಮಿಕಾ ಮಂದಣ್ಣರನ್ನು ಕರೆತರಲು ಯತ್ನಿಸುತ್ತಿದ್ದಾರಂತೆ. ‘ಪುಷ್ಪ’ ಚಿತ್ರದಲ್ಲಿ ಸಮಂತಾ ಅವರ ‘ಊ ಅಂಟಾವಾ’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದು ಸಮಂತಾ ಅವರ ಮೊದಲ ಸ್ಪೆಷಲ್ ಸಾಂಗ್ ಕೂಡ. ಇನ್ನು ವಿಜಯ್, ರಶ್ಮಿಕಾ ನಟಿಸುತ್ತಿರುವ ‘ವಾರಿಸು’ ಚಿತ್ರದ ‘ರಂಜಿತಮೆ’ ಹಾಡು ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಅದಕ್ಕೂ ಉತ್ತಮ ರೆಸ್ಪಾನ್ಸ್ ದೊರೆತಿದೆ. ಈ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಮೊದಲ ಬಾರಿಗೆ ಸ್ಪೆಷಲ್ ಸಾಂಗ್​ನಲ್ಲಿ ಕುಣಿಸಿದರೆ, ಚಿತ್ರಕ್ಕೆ ಪ್ಲಸ್ ಆಗಲಿದೆ ಎಂಬ ಐಡಿಯಾ ಚಿತ್ರತಂಡದ್ದು. ಹಾಗೇನಾದರೂ ರಶ್ಮಿಕಾ ಒಪ್ಪದಿದ್ದಲ್ಲಿ, ಹೆಸರಾಂತ ಬಾಲಿವುಡ್ ನಟಿಯೊಬ್ಬರನ್ನು ಕರೆತರುವ ಪ್ಲಾ್ಯನ್​ನಲ್ಲಿದ್ದಾರೆ ಎನ್ನಲಾಗಿದೆ. ಸದ್ಯ ರಶ್ಮಿಕಾ ಜತೆ ಮಾತುಕತೆ ನಡೆಯುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಈ ಕುರಿತು ಸ್ಪಷ್ಟತೆ ದೊರೆಯುವ ಸಾಧ್ಯತೆಯಿದೆ. -ಏಜೆನ್ಸೀಸ್

ರಷ್ಯಾದಲ್ಲಿ ರಶ್ಮಿಕಾ ಪ್ರಚಾರ...: ಇದೇ ಡಿಸೆಂಬರ್ 8ರಂದು ರಷ್ಯಾ ದೇಶದಲ್ಲಿ ‘ಪುಷ್ಪ ದಿ ರೈಸ್’ ಚಿತ್ರ ಬಿಡುಗಡೆಯಾಗಲಿದೆ. ಹೀಗಾಗಿಯೇ ಇತ್ತೀಚೆಗಷ್ಟೆ ಚಿತ್ರತಂಡ ರಷ್ಯಾ ಭಾಷೆಯಲ್ಲೂ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಹಾಗೆಯೇ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ರಷ್ಯಾಗೆ ತೆರಳಿ ಅಲ್ಲಿ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಬಿಡುಗಡೆಗೂ ಮುನ್ನ 26 ನಗರಗಳಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲಾಗಿದ್ದು, ಕೆಲವೆಡೆ ಚಿತ್ರತಂಡ ಪ್ರೇಕ್ಷಕರೊಂದಿಗೆ ಸಂವಾದ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net