'ಅಪ್ಪು'ಗೆ ಹೆಚ್ಚಿದ 'ಅಭಿ'ಮಾನಿಗಳ ಅಪ್ಪುಗೆ; ರೀ-ರಿಲೀಸ್​ ಚಿತ್ರ ಕಣ್ತುಂಬಿಕೊಂಡ ಮೋಹಕತಾರೆ ರಮ್ಯ | Appu

ವಿಜಯವಾಣಿ - 2025-03-16T165206.829
Published on

Appu Re-Release: ಕನ್ನಡ ಚಿತ್ರರಂಗದ ಪವರ್​ ಸ್ಟಾರ್​, ನಟ ಪುನೀತ್ ರಾಜ್​ಕುಮಾರ್​ ಹೀರೋ ಆಗಿ ನಟಿಸಿದ ಮೊಟ್ಟಮೊದಲ ಸಿನಿಮಾ ‘ಅಪ್ಪು’ ಮಾ.14ರಂದು ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ರೀ-ರಿಲೀಸ್ ಆಯಿತು. ವಾರದ ಮಧ್ಯೆ ಬಿಡುಗಡೆಗೊಂಡ ಅಪ್ಪು ಚಿತ್ರ ಇದೀಗ ವಾರಾಂತ್ಯದಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಬೆಂಗಳೂರಿನ ಹಲವಾರು ಚಿತ್ರಮಂದಿರಗಳಲ್ಲಿ ಇಂದಿಗೂ 'ಅಪ್ಪು' ರೀ-ರಿಲೀಸ್ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆಗಳು ಹರಿದುಬರುತ್ತಿದ್ದು, ಹೊಸ ಸಿನಿಮಾಗೆ ಮುಗಿಬೀಳುವಂತೆ ಪ್ರೇಕ್ಷಕರು ಶನಿವಾರ ಮತ್ತು ಭಾನುವಾರವು ಚಿತ್ರಮಂದಿರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸುತ್ತಿದ್ದಾರೆ. ಸ್ಟಾರ್​ ನಟರ ಹೊಸ ಚಿತ್ರಕ್ಕೆ ಸಿಗುವ ಬೆಂಬಲದಂತೆ ಅಪ್ಪು ಮರುಬಿಡುಗಡೆ ಸಿನಿಮಾಗೆ ಸಿನಿಪ್ರಿಯರು ಒಲವು ತೋರಿರುವುದು ಗಮನಾರ್ಹ.

ಮೊದಲ ದಿನದ ಪ್ರದರ್ಶನದಲ್ಲಿ ಸ್ಯಾಂಡಲ್​ವುಡ್​ ನಟಿ ರಕ್ಷಿತಾ ಪ್ರೇಮ್, ನಿರೂಪಕಿ ಅನುಶ್ರೀ ಸೇರಿದಂತೆ ಮುಂತಾದ ಕಲಾವಿದರು ಆಗಮಿಸಿ, ಪುನೀತ್ ರಾಜ್​ಕುಮಾರ್​ ಅವರನ್ನು ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ಕಣ್ತುಂಬಿಕೊಂಡು ಖುಷಿಪಟ್ಟರು. ಇನ್ನು ಇಂದು ಕನ್ನಡ ಚಿತ್ರರಂಗದ ಮೋಹಕತಾರೆ, ನಟಿ ರಮ್ಯ ಮತ್ತು ಶರ್ಮಿಳಾ ಮಾಂಡ್ರೆ ನಗರದ ವೀರೇಶ್​ ಚಿತ್ರಮಂದಿರಕ್ಕೆ ಆಗಮಿಸಿ, ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಪ್ಪು ಅಭಿಮಾನಿಗಳ ಮಧ್ಯೆಯೇ ಚಿತ್ರ ವೀಕ್ಷಿಸಿದರು. ಈ ವೇಳೆ ತಮ್ಮ ನೆಚ್ಚಿನ ನಟಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗ್ಗಿಬಿದ್ದರು. ಪ್ರಸ್ತುತ ಅಪ್ಪು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ, ಪ್ರೋತ್ಸಾಹ ಲಭಿಸುತ್ತಿದ್ದು, ಪ್ರೇಕ್ಷಕರು ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಆಗಮಿಸುತ್ತಿದ್ದಾರೆ.

ನಗುಮುಖದ 'ರಾಜಕುಮಾರ'

ತಮ್ಮ ಸರಳತೆ, ಸಜ್ಜನಿಕೆ, ನಗುಮುಖದ ಸ್ವಭಾವದಿಂದಲೇ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಬೇರೂರಿ ಕುಳಿತಿರುವ ಪುನೀತ್ ರಾಜ್​ಕುಮಾರ್​ರನ್ನು ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ ಅನ್ನೋದಕ್ಕೆ ಇಂದಿನ ಅಪ್ಪು ರೀ-ರಿಲೀಸ್ ಚಿತ್ರವೇ ಜ್ವಲಂತ ಸಾಕ್ಷಿ. ಬ್ಲಾಕ್​ಬಸ್ಟರ್​ ಹಿಟ್​ ಚಿತ್ರವನ್ನು ಮತ್ತೊಮ್ಮೆ ಚಿತ್ರಮಂದಿರದಲ್ಲಿ ನೋಡಿದ ಅಭಿಮಾನಿಗಳು ಮತ್ತು ಸಿನಿಪ್ರಿಯರು ಇದು ಹೊಸ ಚಿತ್ರ ಎಂಬಂತೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದು ವಿಶೇಷ.

2002ರಲ್ಲಿ 'ಅಪ್ಪು'

ರಾಜ್ಯದ ಬಹುತೇಕ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಪುನೀತ್ ರಾಜ್​ಕುಮಾರ್​ ಅಭಿನಯದ ಅಪ್ಪು 2002ರಲ್ಲಿ ತೆರೆಕಂಡು, ಶತದಿನೋತ್ಸವ ಸಂಭ್ರಮ ಕಂಡಿತ್ತು. ಅಂದು ದೊಡ್ಡ ಮಟ್ಟದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ಅಪ್ಪು ಚಿತ್ರ ಶತದಿನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಈ ಸಂಭ್ರಮಾಚರಣೆ ಕಾರ್ಯಕ್ರಮದ ವಿಡಿಯೋಗಳು ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net