ಮಕ್ಕಳ ದಾಖಲಾತಿಗಿಂತ ಹಾಜರಾತಿಗೆ ಒತ್ತು ನೀಡಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ

Keravadi School Function Shatamanotsava
Published on

ಬ್ಯಾಡಗಿ: ಶೀಘ್ರದಲ್ಲೇ ಐದು ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಶೈಕ್ಷಣಿಕ ವ್ಯವಸ್ಥೆ ಬಲಪಡಿಸಲು ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿಗಿಂತ ಹಾಜರಾತಿಗೆ ವಿಶೇಷ ಒತ್ತು ನೀಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲೂಕಿನ ಕೆರವಡಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಶಾಲೆ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನ ಬಜೆಟ್​ನಲ್ಲಿ 45 ಸಾವಿರ ಕೋಟಿ ರೂ.ಗಳನ್ನು ಶಿಕ್ಷಣ ಕ್ಷೇತ್ರಕ್ಕೆ ತೆಗೆದಿರಿಸಲಾಗಿದೆ. ಇಲಾಖೆಯ ಹಿಂದಿನ 2,700 ಕೋ.ರೂ. ಸಾಲವನ್ನು ಸರ್ಕಾರ ತೀರಿಸಿದೆ. ಈ ಹಿಂದೆ ಕದರಮಂಡಲಗಿ ಶಾಲೆಯ ಹಳೆಯ ವಿದ್ಯಾರ್ಥಿಗಳು 1 ಕೋ.ರೂ. ವೆಚ್ಚದಲ್ಲಿ ನಿರ್ವಿುಸಿದ್ದ ಶಾಲಾ ಕಟ್ಟಡ ಉದ್ಘಾಟನೆಗೆ ಮುಖ್ಯಮಂತ್ರಿಗಳ ಜತೆಗೆ ಬಂದಿದ್ದೆ. ಆ ಕಾರ್ಯಕ್ರಮದಿಂದ ರಾಜ್ಯಕ್ಕೆ ಉತ್ತಮ ಸಂದೇಶ ಹೋಗಿದೆ. ಸಿಎಂ ಸಿದ್ದರಾಮಯ್ಯ ತಾವು ಕಲಿತ ಶಾಲೆಗೆ 10 ಲಕ್ಷ ರೂ. ಹಾಗೂ ನನ್ನ ತಂದೆ ಕಲಿತ ಶಾಲೆಗೆ ನಾನು 5 ಲಕ್ಷ ರೂ. ದೇಣಿಗೆ ನೀಡಿದ್ದೇನೆ ಎಂದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಶತಮಾನ ಪೂರೈಸಿದ ಕೆರವಡಿ ಶಾಲೆಯನ್ನು ಪಬ್ಲಿಕ್ ಶಾಲೆ ಎಂದು ಘೊಷಿಸಬೇಕು. ತಾಲೂಕಿನ ಶಾಲೆಗಳಿಗೆ ಪ್ರಸಕ್ತ ವರ್ಷ ಕನಿಷ್ಠ 100 ಕೊಠಡಿ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ನಾನು ಕಲಿತ ಅಗಡಿ ಪ್ರಾಥಮಿಕ ಶಾಲೆಗೆ 5 ಲಕ್ಷ ರೂ. ನೀಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net