

ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಸಾಲುಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಮದನಿಕ ಸಿನಿಮಾ ಚಿತ್ರೀಕರಣದ ವೇಳೆ ಅವರ ಕಾಲಿಗೆ ಪೆಟ್ಟಾಗಿದ್ದು, ಶೂಟಿಂಗ್ ಕ್ಯಾನ್ಸಲ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿದ್ದ ಈ ಚಿತ್ರದ ಶೂಟಿಂಗ್ ಸಮಯದಲ್ಲಿ ರಾಗಿಣಿ ಅವರಿಗೆ ಏಟುಬಿದ್ದಿದ್ದು, ಶೂಟಿಂಗ್ ಕೆಲವು ದಿನಗಳ ಕಾಲ ನಿಲ್ಲಿಸಲಾಗಿದೆ. ಈ ಕುರಿತು ನಟಿ, ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ಈ ಚಿತ್ರದಲ್ಲಿ ರಾಗಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರವು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಬೆಂಗಳೂರು ಸ್ಟುಡಿಯೋಸ್ನಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಮಯದಲ್ಲಿ ಅವಘಡ ಸಂಭವಿಸಿದ್ದು, ಚಿಕಿತ್ಸೆ ನಂತರ ವೈದ್ಯರು ಒಂದು ವಾರ ವಿಶ್ರಾಂತಿಗೆ ಸೂಚಿಸಿರುವ ಕಾರಣ, ರೆಸ್ಟ್ ಮಾಡುತ್ತಿದ್ದಾರೆ.
ನಟಿಯ ಕಾಲಿಗೆ ಪೆಟ್ಟಾಗಿರುವ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ನೋವಿನ ನಡುವೆಯೂ ನಟಿ ನಗುತ್ತಿರುವುದನ್ನು ನೋಡಬಹುದು. ನಟಿಯ ಕಾಲಿಗೆ ಸ್ವಲ್ಪ ಫ್ರ್ಯಾಕ್ಚರ್ ಆಗಿದ್ದು, ಗಂಭೀರ ಸಮಸ್ಯೆ ಏನೂ ಇಲ್ಲ ಎಂದು ವೈದ್ಯರು ಹೇಳಿರುವುದಾಗಿ ವರದಿ ಆಗಿದೆ.
ರಾಗಿಣಿ ನಾಯಕಿಯಾಗಿ ನಟಿಸಿರುವ ‘ಬಿಂಗೊ’ ಚಿತ್ರದ ಶೂಟಿಂಗ್ ಇತ್ತೀಚೆಗೆ ಮುಕ್ತಾಯವಾಗಿದೆ. ಶಂಭೋ ಶಿವ ಶಂಕರ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ಆರ್.ಕೆ ಚಂದನ್ ನಾಯಕನಾಗಿ ನಟಿಸುತ್ತಿದ್ದಾರೆ. ಇದರ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಈ ನಡುವೆ ಮದನಿಕ ಶೂಟಿಂಗ್ ಸಮಯದಲ್ಲಿ ಅವಘಡ ಸಂಭವಿಸಿದೆ.