ಹಿರಿಯ ನಟಿ ಪದ್ಮಜಾ ರಾವ್​ಗೆ ಮೂರು ತಿಂಗಳು ಸಜೆ; ಪ್ರಕರಣದ ವಿವರ ಇಲ್ಲಿದೆ

Padmaja Rao
Published on

ಬೆಂಗಳೂರು: ನಟ ದರ್ಶನ್​ ಜೈಲುಪಾಲಾದ ಬಳಿಕ ಕನ್ನಡ ಚಿತ್ರರಂಗದ ನಟ-ನಟಿಯರ ಒಂದೊಂದೇ ವಿವಾದಗಳು ಹೊರಬರುತ್ತಿದ್ದು, ಸ್ಯಾಂಡಲ್​ವುಡ್​ಗೆ ಇದು ಕಪ್ಪು ಚುಕ್ಕೆಯಾಗಿದೆ. ಇದೀಗ ಚೆಕ್​ಬೌನ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ನ ಹಿರಿಯ ನಟಿ ಪದ್ಮಜಾ ರಾವ್​ ಅವರಿಗೆ ನ್ಯಾಯಾಲಯವು 3 ತಿಂಗಳ ಸಜೆ ಹಾಗೂ 40 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ನಾಲ್ಕು ವರ್ಷಗಳ ಹಿಂದೆ ನಟಿ ಪದ್ಮಜಾ ರಾವ್ ಅವರ ಚೆಕ್‌ ಬೌನ್ಸ್ ಪ್ರಕರಣ ಭಾರೀ ಸುದ್ದಿಯಾಗಿತ್ತು. ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಸಿನಿಮಾ ಜೊತೆಗೆ ಸದ್ಯ ಕಿರುತೆರೆಯಲ್ಲೂ ಬಹುಬೇಡಿಕೆಯ ನಟಿಯಾಗಿರುವ ಪದ್ಮಜಾ ರಾವ್ ಅವರನ್ನು ದೋಷಿ ಎಂದು ತೀರ್ಪು ನೀಡಿರುವ ಮಂಗಳೂರಿನ ಎಂಟನೇ ಜೆಎಂಎಫ್‌ಸಿ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಪ್ರಕರಣದ ಹಿನ್ನೆಲೆ?

ನಟಿ ಪದ್ಮಜಾ ರಾವ್​ 2020ರಲ್ಲಿ ತುಳು ಸಿನಿಮಾ ನಿರ್ದೇಶಕ, ವೀರೂ ಟಾಕೀಸ್​ ಸಂಸ್ಥೆಯ ಮಾಲೀಕ ವೀರೇಂದ್ರ ಶೆಟ್ಟಿ ಕಾವೂರು ಅವರ ಬಳಿ ನಟಿ ಪದ್ಮಜಾ ರಾವ್​ 40 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಭದ್ರತೆ ದೃಷ್ಟಿಯಿಂದ ಪದ್ಮಜಾ ರಾವ್ ಚೆಕ್ ನೀಡಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಪದ್ಮಜಾ ಅವರು ಹಣ ಪಾವತಿ ಮಾಡಿಲ್ಲ. ಹೀಗಾಗಿ, ವಿರೇಂದ್ರ ಶೆಟ್ಟಿ ಅವರು 2021ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಮೊದಲು ವಿಚಾರಣೆಗೆ ಹಾಜರಾದ ಪದ್ಮಜಾ ರಾವ್ ಅವರು ಬೇರೆಯದೇ ರೀತಿಯ ಹೇಳಿಕೆ ನೀಡಿದ್ದರು. ನಾನು ಸಾಲವನ್ನೇ ಪಡೆದಿಲ್ಲ ಎಂದಿದ್ದ ಅವರು, ಚೆಕ್ ನೀಡಿದ ವಿಚಾರವನ್ನೂ ಅಲ್ಲಗಳೆದಿದ್ದರು. ಜೊತೆಗೆ ಪದ್ಮಜಾ ರಾವ್ ಅವರ ಚೆಕ್​ನ ಕದ್ದು ಸಹಿ ನಕಲು ಮಾಡಿದ ಆರೋಪವನ್ನು ಪದ್ಮಜಾ ರಾವ್ ಮಾಡಿದ್ದರು. ಆದರೆ, ಇದಕ್ಕೆ ಸಂಬಂಧಿಸಿ ಅವರು ಕೊರ್ಟ್​ನಲ್ಲಿ ಸಾಕ್ಷಿಗಳನ್ನು ಒದಗಿಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್​ ವೀರೇಂದ್ರ ಅವರ ಪರ ತೀರ್ಪು ನೀಡಿದ್ದು, 4.20 ಲಕ್ಷ ರೂ. ದಂಡವನ್ನು ವಿಧಿಸಿದೆ. ಇದರಲ್ಲಿ 40.17 ಲಕ್ಷ ರೂಪಾಯಿ ಹಣವನ್ನು ದೂರುದಾರನಿಗೆ ಕೊಡಬೇಕಿದೆ. ಉಳಿದ 3 ಸಾವಿರ ರೂಪಾಯಿ ಹಣವನ್ನು ಅವರು ಸರ್ಕಾರಕ್ಕ ಕಟ್ಟಬೇಕಿದೆ.

ಸದ್ಯ ಖಾಸಗಿ ವಾಹಿನಿಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸುತ್ತಿರುವ ಪದ್ಮಜಾ ರಾವ್‌, ಜನ ಮೆಚ್ಚಿದ ಅತ್ತೆಯಾಗಿ ಕುಸುಮಾ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಈ ಧಾರಾವಾಹಿಯಲ್ಲಿ ಕುಸುಮಾ ಪಾತ್ರವೇ ಹೈಲೆಟ್‌ ಆಗಿದ್ದು, ಒಂದು ವೇಳೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಪದ್ಮಜಾ ರಾವ್‌ ಜೈಲು ಪಾಲಾದರೆ ಅವರ ನಟನೆಯ ಪ್ರಾಜೆಕ್ಟ್‌ಗಳ ಕಥೆಯೇನು ಎನ್ನುವುದು ಮುಂದಿರುವ ಪ್ರಶ್ನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net