'ಅವನೇ ನನ್ನ ಪ್ರಪಂಚ... ವಿಚ್ಛೇದನವಾಗಿ 25 ವರ್ಷದ ಬಳಿಕ ಹಿರಿಯ ನಟಿ ನಳಿನಿ ಹೀಗೆಂದಿದ್ದೇಕೆ?

nalini
Published on

ಚೆನ್ನೈ: ನನ್ನ ಗಂಡನೇ ನನ್ನ ಪ್ರಪಂಚ, ಅವರ ಜಾಗದಲ್ಲಿ ಬೇರೆ ಯಾರನ್ನೂ ನೋಡಲು ಸಾಧ್ಯವಿಲ್ಲ ಎಂದು ನಟಿ ನಳಿನಿ ತಮ್ಮ ಪತಿ ಬಗ್ಗೆ ಸಂದರ್ಶನ ನೀಡಿದ್ದಾರೆ.

80 ರ ದಶಕದಲ್ಲಿ ಜನಪ್ರಿಯ ನಟಿಯಾಗಿದ್ದವರು ನಳಿನಿ. ನಾಯಕ ನಟರಾದ ಸತ್ಯರಾಜ್, ವಿಜಯಕಾಂತ್, ಮೋಹನ್ ಮತ್ತು ಕಮಲ್ ಅವರ ಚಿತ್ರಗಳಲ್ಲಿ ನಟಿಸುತ್ತ, ಗಮನಸೆಳೆದಿದ್ದರು.

1987 ರಲ್ಲಿ ನಳಿನಿ ನಟ ರಾಮರಾಜನ್ ರನ್ನು ಪ್ರೀತಿಸಿ ಮದುವೆಯಾದರು. ಅವರಿಗೆ ಅರುಣ ಮತ್ತು ಅರುಣ್ ಎಂಬ ಅವಳಿ ಮಕ್ಕಳೂ ಇದ್ದಾರೆ. 13 ವರ್ಷಗಳ ಕಾಲ ದಾಂಪತ್ಯ ನಡೆಸಿದ ನಂತರ ಕೆಲವು ಕಾರಣಗಳಿಂದ ವಿಚ್ಛೇದನ ಪಡೆದರು.

ನಳಿನಿ ಮದುವೆಯ ನಂತರ ಚಿತ್ರರಂಗದಿಂದ ದೂರವಾದರು. ಬಳಿಕ ರಾಮರಾಜನ್‌ ಅವರಿಂದ ವಿಚ್ಛೇದನ ಪಡೆದುಕೊಂಡು ಪ್ರಸ್ತುತ ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅವರು ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.

"ನಾನು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾಗ ರಾಮರಾಜನ್‌ ನನ್ನ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರು. ಆಗ ಅವರು ನನ್ನನ್ನು ಪ್ರೀತಿಸುತ್ತಿದ್ದರು. ನನ್ನ ಮೇಕಪ್ ಹುಡುಗಿ ಮೂಲಕ ನನಗೆ ಪ್ರೇಮ ಪತ್ರಗಳನ್ನು ಕಳುಹಿಸುತ್ತಿದ್ದರು. ಕೆಲವು ದಿನಗಳ ಬಳಿಕ ನಾನು ಅವರೊಂದಿಗೆ ಪ್ರೀತಿಯಲ್ಲಿ ಸಿಲುಕಿದೆ, ಅವರು ಮದುವೆಯಾಗುವಂತೆ ಕೇಳಿದರು. ನಾನು ಅವನನ್ನು ಮನೆಗೆ ಬಂದು ಹುಡುಗಿ ಕೇಳಲು ಹೇಳಿದೆ. ಆದರೆ ಮನೆಯಲ್ಲಿ ಪಾಲಕರು ನಮ್ಮ ಮದುವೆಗೆ ಒಪ್ಪದ ಕಾರಣ ಓಡಿ ಹೋಗಿ ಮದುವೆ ಮಾಡಿಕೊಂಡೆವು. ಒಂದು ತಿಂಗಳು ತಲೆಮರೆಸಿಕೊಂಡಿದ್ದೆವು. ಆಗ ನನ್ನ ತಂದೆ-ತಾಯಿಯನ್ನು ಒಪ್ಪಿಸಿದವರು ಎಂಜಿಆರ್" ಎಂದು ವಿವರಿಸಿದರು.

ಅವನೇ ನನ್ನ ಪ್ರಪಂಚ: ನಾನು 13 ವರ್ಷ ಅವರೊಟ್ಟಿಗೆ ವಾಸಿಸುತ್ತಿದ್ದೆ. ಆದರೆ ಇದ್ದಕ್ಕಿದ್ದಂತೆ ಇಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದು ವಿಚ್ಛೇದನ ಪಡೆದುಕೊಂಡೆವು. ಜೀವನ ಇದ್ದಕ್ಕಿದ್ದಂತೆ ಹೀಗೆ ಬದಲಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಅವನೇ ನನ್ನ ಜಗತ್ತು ಅಂದುಕೊಂಡಿದ್ದೆ, ಮಕ್ಕಳ ಮೇಲಿನ ಮೋಹದಿಂದ ಮತ್ತೆ ದುಡಿಮೆಗೆ ಒಗ್ಗಿಕೊಳ್ಳಬೇಕಾಯಿತು. ವಿಚ್ಛೇದನ ಪಡೆದು 25 ವರ್ಷ ಕಳೆದರೂ ನನ್ನ ಗಂಡನ ಜಾಗದಲ್ಲಿ ಯಾರನ್ನೂ ನೋಡಿಲ್ಲ ಎಂದು ನಳಿನಿ ಮನಬಿಚ್ಚಿ ಮಾತನಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net