ಕಡೆಗೂ ತಲೆಮರಿಸಿಕೊಂಡಿದ್ದ ನಟಿ ಕಸ್ತೂರಿ ಅರೆಸ್ಟ್​! ವಿಶೇಷ ತಂಡ ನಿಯೋಜಿಸಿದ ಕೆಲವೇ ಗಂಟೆಗಳಲ್ಲಿ ಬಂಧನ

ವಿಜಯವಾಣಿ - 2024-11-16T174454.187
Published on

ಹೈದರಾಬಾದ್​: ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಬಂಧನ ಭೀತಿ ಎದುರಿಸುತ್ತಿದ್ದ ನಟಿ ಕಸ್ತೂರಿ ಶಂಕರ್, ಕಳೆದ ಕೆಲವು ದಿನಗಳಿಂದ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡಿದ್ದರು. ಇಂದು ವಿಶೇಷ ತಂಡ ನಿಯೋಜಿಸಿದ ಚೆನ್ನೈ ಪೊಲೀಸರು, ತಂಡ ರಚಿಸಿದ ಕೆಲವೇ ಗಂಟೆಗಳಲ್ಲಿ ಸೈಬರಾಬಾದ್ ಪೊಲೀಸರ ನೆರವಿನೊಂದಿಗೆ ನಟಿ ಕಸ್ತೂರಿ ಶಂಕರ್​ರನ್ನು ಇಂದು ಹೈದರಾಬಾದ್‌ನ ಗಚಿಬೌಲಿಯಲ್ಲಿ ಬಂಧಿಸಿದ್ದಾರೆ. ತೆಲುಗು ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಇದೀಗ ನಟಿಯನ್ನು ಅರೆಸ್ಟ್​ ಮಾಡಲಾಗಿದೆ.

ಪೊಲೀಸರಿಂದ ತಲೆಮರೆಸಿಕೊಂಡಿದ್ದ ತಮಿಳು ನಟಿ ಕಸ್ತೂರಿ ಶಂಕರ್ ಪತ್ತೆಹಚ್ಚಲು ಚೆನ್ನೈ ಪೊಲೀಸ್ ಆಯುಕ್ತರು ಇಂದು ಆಂಧ್ರಪ್ರದೇಶಕ್ಕೆ ವಿಶೇಷ ತಂಡವನ್ನು ಕಳುಹಿಸಿದ್ದರು. ಕೆಲವೇ ಗಂಟೆಗಳಲ್ಲಿ ನಟಿಯಿರುವ ಸ್ಥಳ ಪತ್ತೆ ಮಾಡಿದ ಪೊಲೀಸರು, ಇದೀಗ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನವೆಂಬರ್ 14ರಂದು, ತೆಲುಗು ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಕಸ್ತೂರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತು. ಜಾಮೀನು ರದ್ದಾದ ಬೆನ್ನಲ್ಲೇ ನಟಿ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡಿದ್ದರು. ಪೊಲೀಸರ ತನಿಖೆಯಿಂದ ಓಡಿ ಹೋಗಿದ್ದ ಕಸ್ತೂರಿಯನ್ನು ವಿಶೇಷ ತಂಡ ಬಂಧಿಸಿ, ಸದ್ಯ ಚೆನ್ನೈಗೆ ಕರೆತರುತ್ತಿದೆ.

ಏನಿದು ವಿವಾದ?

ನವೆಂಬರ್ 3ರಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡಿನಲ್ಲಿ ಬ್ರಾಹ್ಮಣರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಬಲಪಂಥೀಯ ಸಂಘಟನೆಯಾದ ಹಿಂದು ಮಕ್ಕಳ್ ಕಚ್ಚಿ (ಎಚ್‌ಎಂಕೆ) ಸಂಸ್ಥಾಪಕ ಅರ್ಜುನ್ ಸಂಪತ್ ಆಯೋಜಿಸಿದ್ದ ಸಮಾವೇಶದಲ್ಲಿ ಅಸ್ಪೃಶ್ಯತೆಯಂತಹ ಜಾತಿ ಪದ್ಧತಿಯನ್ನು ರದ್ದುಗೊಳಿಸಿರುವ ನಾಗರಿಕ ಹಕ್ಕುಗಳ ರಕ್ಷಣೆ (ಪಿಸಿಆರ್) ಕಾಯ್ದೆಯ ಅಡಿಯಲ್ಲಿ ಬ್ರಾಹ್ಮಣರಿಗೂ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಲಾಯಿತು. ಈ ಸಮಾವೇಶದಲ್ಲಿ ಮಾತನಾಡಿದ ಕಸ್ತೂರಿ, 300 ವರ್ಷಗಳ ಹಿಂದೆ ರಾಜನ ಸಂಗಾತಿಯ ಸಹಾಯಕರಾಗಿ ತೆಲುಗು ಮಂದಿ ತಮಿಳುನಾಡಿಗೆ ಬಂದಿದ್ದರು. ಅದಾದ ಬಳಿಕ ತಮಿಳಿಗರು ಎಂದು ತಮ್ಮ ಐಡೆಂಟಿಟಿಯನ್ನು ಬಲಪಡಿಸಿಕೊಂಡರು ಎಂದು ಕಸ್ತೂರಿ ಹೇಳಿಕೆ ನೀಡಿದ್ದರು. ಇದು ತಮಿಳು ಮತ್ತು ತೆಲುಗು ರಾಜ್ಯಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಯಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net