

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಕ್ರಿಯರಾಗಿರುವ ಸ್ಟಾರ್ ಕಲಾವಿದರ ಪೈಕಿ ಬಾಲಿವುಡ್ನ ಹಾಟ್ ನಟಿ ಕಂಗನಾ ರಣಾವತ್ ಕೂಡ ಒಬ್ಬರು. ಸದಾ ಒಂದಲ್ಲ ಒಂದು ವಿಚಾರಗಳಿಂದ ಸಿಕ್ಕಾಪಟ್ಟೆ ಟ್ರೋಲ್ ಮತ್ತು ವ್ಯಾಪಕ ಟೀಕೆಗಳಿಗೆ ಗುರಿಯಾಗುವ ನಟಿ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡುವ ಎಂದು ಹೇಳಿದ್ದ ಕಂಗನಾ, ತಮ್ಮ ಹೇಳಿಕೆಗೆ ಪುಷ್ಟಿ ನೀಡುವಂತೆ ಅನಾಮಧೇಯ ವ್ಯಕ್ತಿಯ ಕೈಹಿಡಿದು, ಜತೆಗಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದ್ಯ ಈ ಎಲ್ಲಾ ವದಂತಿಗಳಿಗೆ ಇದೀಗ ಒಂದೇ ಹೇಳಿಕೆಯಲ್ಲಿ ಉತ್ತರ ಕೊಟ್ಟಿದ್ದಾರೆ.
ಅನಾಮಧೇಯ ವಿದೇಶಿ ವ್ಯಕ್ತಿಯ ಕೈಹಿಡಿದುಕೊಂಡಿರುವ ಕಂಗನಾ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡಿತ್ತು. ಫೋಟೋ ನಟಿಯ ಮದುವೆ ಹಾಗೂ ಬಾಯ್ಫ್ರೆಂಡ್ ವಿಚಾರವನ್ನು ತೀವ್ರ ಪ್ರಸಾಪಿಸುತ್ತಿದ್ದಂತೆ, ಅವರ ಅಭಿಮಾನಿಗಳಲ್ಲಿ ಇದು ನಿಜವೇ ಇರಬಹುದೇನೋ ಎಂಬ ಗೊಂದಲ ಮೂಡಿತ್ತು. ಈ ಕುರಿತಂತೆ ಅನೇಕರು ನಟಿಯನ್ನೇ ನೇರವಾಗಿ ಪ್ರಶ್ನಿಸಿದ್ದರು. ತೀವ್ರ ವದಂತಿಗಳ ಬೆನ್ನಲ್ಲೇ ಇದೀಗ ಕಂಗನಾ ಸ್ಪಷ್ಟನೆ ಕೊಟ್ಟಿದ್ದು, ಎಲ್ಲಾ ಪ್ರಶ್ನೆಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
"ನೀವು ಫೋಟೋದಲ್ಲಿ ನೋಡಿದ ವ್ಯಕ್ತಿ ನನ್ನ ಬಾಯ್ಫ್ರೆಂಡ್ ಅಲ್ಲ! ಆತ ನನ್ನ ಹೇರ್ ಸ್ಟೈಲಿಸ್ಟ್. ನಿನ್ನೆಯಿಂದ ನನಗೆ ಹಲವಾರು ದೂರವಾಣಿ ಕರೆ ಮತ್ತು ಸಂದೇಶಗಳು ಬಂದಿವೆ. ಎಲ್ಲರೂ ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗಳನೇ ಕೇಳಿದ್ದಾರೆ. ನಾನು ಆಗಾಗ್ಗೆ ಸಲೂನ್ಗೆ ಹೋಗ್ತೀನಿ, ಇದನ್ನು ಬೇರೆ ರೀತಿ ತೋರಿಸಲಾಗುತ್ತಿದೆ. ಒಬ್ಬ ಹುಡುಗ ಮತ್ತು ಹುಡುಗಿ ಒಟ್ಟಿಗೆ ಹೊರಗೆ ಓಡಾಡಿದರೆ ಅವರು ಸಹೋದ್ಯೋಗಿಗಳು, ಸ್ನೇಹಿತರು ಆಗಿರಬಹುದು. ಅದನ್ನು ತಿಳಿಯದೆ ಅನ್ಯರ್ಥಗಳನ್ನು ಕಲ್ಪಿಸಬಾರದು" ಎಂದು ಹೇಳಿದ್ದಾರೆ,(ಏಜೆನ್ಸೀಸ್).