

Emma Thompson: ಡಿವೋರ್ಸ್ ಆದ ದಿನವೇ ಇಂದಿನ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ಮಾಡಿ ನನ್ನನ್ನು ಡೇಟಿಂಗ್ಗೆ ಕರೆದಿದ್ದರು ಎಂದು 66 ವರ್ಷದ ಬ್ರಿಟನ್ ಮೂಲದ ಆಸ್ಕರ್ ಪ್ರಶಸ್ತಿ ವಿಜೇತ ನಟಿ ಎಮ್ಮಾ ಥಾಮ್ಸನ್ ಹೇಳಿದ್ದಾರೆ.
ಆಗಸ್ಟ್ 8 ರಂದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ ತಮ್ಮ ವೃತ್ತಿಜೀವನದ ಸಾಧನೆಗಾಗಿ ಲೆಪರ್ಡ್ ಕ್ಲಬ್ ಪ್ರಶಸ್ತಿಯನ್ನು ಸ್ವೀಕರಿಸಿದ ಶ್ರೀಮತಿ ಥಾಮ್ಸನ್, 1998ರ 'ಪ್ರೈಮರಿ ಕಲರ್ಸ್' ಚಿತ್ರೀಕರಣದ ಸಮಯದಲ್ಲಿ ಟ್ರಂಪ್ ಅವರಿಂದ ಬಂದ ಅಚ್ಚರಿಯ ಕರೆಯನ್ನು ನೆನಪಿಸಿಕೊಂಡರು.
ದಿ ಟೆಲಿಗ್ರಾಫ್ ಜೊತೆ ಮಾತನಾಡಿರುವ ನಟಿ ಎಮ್ಮಾ ಥಾಮ್ಸನ್, "ಅವರು ನನ್ನನ್ನು ಹಿಂಬಾಲಿಸುತ್ತಿದ್ದರು ಅಂತ ಕಾಣಿಸುತ್ತೆ. ಒಂದು ವೇಳೆ ಅಂದಿನ ಟ್ರಂಪ್ ಆಫರ್ ಒಪ್ಪಿಕೊಂಡಿದ್ದರೆ ಅಮೆರಿಕಾದ ಇತಿಹಾಸದ ದಿಕ್ಕನ್ನೇ ಬದಲಿಸಬಹುದಿತ್ತು" ಎಂದು ಹಾಸ್ಯಮಯವಾಗಿ ಮಾತನಾಡಿದ್ದಾರೆ.
"ನಾನು ನನ್ನ ಟ್ರೈಲರ್‌ನಲ್ಲಿ ಇದ್ದಾಗ ಫೋನ್ ರಿಂಗ್ ಆಯಿತು. ಫೋನ್ ಎತ್ತಿದ ತಕ್ಷಣ, 'ಹಲೋ, ಇದು ಡೊನಾಲ್ಡ್ ಟ್ರಂಪ್' ಎಂಬ ಧ್ವನಿ ಕೇಳಿತು, ಆರಂಭದಲ್ಲಿ ಅದು ತಮಾಷೆ ಅಂತ ಭಾವಿಸಿದ್ದೆ. ಆಮೇಲೆ ಬಹುಶಃ ಅವರಿಗೆ ಯಾರಿಂದಾದರೂ ನಿರ್ದೇಶನಗಳು ಬೇಕಾಗಬಹುದೆಂದು, ನಾನು ನಿಮಗೆ ಹೇಗೆ ಸಹಾಯ ಮಾಡಲಿ? ಕೇಳಿದೆ.
ಬಳಿಕ ಟ್ರಂಪ್, "ನೀವು ನನ್ನ ಸುಂದರ ಸ್ಥಳಗಳಲ್ಲಿ ಒಂದಕ್ಕೆ ಬರಲು ನಾನು ಇಷ್ಟಪಡುತ್ತೇನೆ. ಬಹುಶಃ ನಾವಿಬ್ಬರು ಡಿನ್ನರ್ ಮಾಡಬಹುದು" ಎಂದು ಹೇಳಿದರು. ಅದಕ್ಕೆ ನಾನು ಅಯ್ಯೋ ತುಂಬಾ ಮಧುರವಾಗಿದೆ. ಧನ್ಯವಾದಗಳು. ನಿಮ್ಮನ್ನು ನಾನು ಸಂಪರ್ಕಿಸುತ್ತೇನೆ ಎಂದು ಹೇಳಿದೆ" ಎಂದಿದ್ದಾರೆ.
ಆ ದಿನವೇ ನನ್ನ ವಿಚ್ಛೇದನದ ತೀರ್ಪು ಬಂದಿದೆ ಎಂದು ತಿಳಿದುಕೊಂಡೆ. ಬಳಿಕ ಅನುಮಾನ ಬಂತು. ಅವನು ತನ್ನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಹುದಾದ ಸೂಕ್ತ ವ್ಯಕ್ತಿಗಳನ್ನು ಹುಡುಕುವ ಜನರನ್ನು ಇಟ್ಟುಕೊಂಡಿದ್ದಾನೆ ಅನ್ನಿಸಿತು. ನಿಮಗೆ ಗೊತ್ತಲ್ಲ, ಚೆನ್ನಾಗಿರುವ ವಿಚ್ಛೇದಿತೆಯನ್ನೇ ಅವರು ಹುಡುಕುತ್ತಿದ್ದರು ಎಂದು ಹೇಳಿದ್ದಾರೆ.
1989ರಲ್ಲಿ ನಟ ಕೆನ್ನೆತ್ ಭ್ರಾನಾಗ್ರನ್ನು ವಿವಾಹವಾಗಿದ್ದ ಎಮ್ಮಾ ಥಾಮ್ಸನ್ 1995ರಲ್ಲಿ ಡಿವೋರ್ಸ್ ನೀಡಿದರು. ಬಳಿಕ 2003ರಲ್ಲಿ ನಟ ಗ್ರೆಗ್ವೈಸ್ ಅವರನ್ನು ಮದುವೆಯಾದರು. ಡೊನಾಲ್ಡ್ ಟ್ರಂಪ್ ಸಹ ತಮ್ಮ 2ನೇ ಪತ್ನಿ ಮಾರ್ಲಾ ಮೇಪಲ್ಸ್ರಿಂದ ಬೇರ್ಪಟ್ಟು 2005ರಲ್ಲಿ ಮೆಲಾನಿಯಾ ಟ್ರಂಪ್ರನ್ನು ವಿವಾಹವಾಗಿದ್ದಾರೆ
ಎಮ್ಮಾ ಥಾಮ್ಸನ್ ಯಾರು?
ಎಮ್ಮಾ ಥಾಮ್ಸನ್ ಬ್ರಿಟನ್ ಮೂಲದ ಆಸ್ಕರ್ ಪ್ರಶಸ್ತಿ ವಿಜೇತ ನಟಿ ಮತ್ತು ಚಿತ್ರ ಕಥೆಗಾರ್ತಿ. ಸುಮಾರು 4 ದಶಕಗಳ ಕಾಲ ಬ್ರಿಟನ್ ಚಿತ್ರೋದ್ಯಮ ಮತ್ತು ರಂಗಭೂಮಿಯಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ. ಎರಡು ಅಕಾಡೆಮಿ ಪ್ರಶಸ್ತಿ, ಮೂರು BAFTA ಪ್ರಶಸ್ತಿಗಳು, ಎರಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು ಮತ್ತು ಪ್ರೈಮ್‌ಟೈಮ್ ಎಮ್ಮಿ ಪ್ರಶಸ್ತಿ ಸಿಕ್ಕಿವೆ. 2018 ರಲ್ಲಿ, ನಾಟಕಕ್ಕೆ ನೀಡಿದ ಕೊಡುಗೆಗಳಿಗಾಗಿ ರಾಣಿ ಎಲಿಜಬೆತ್ II ಅವರಿಂದ ಅವರಿಗೆ ಡೇಮ್ ಪ್ರಶಸ್ತಿ ನೀಡಲಾಯಿತು.(ಏಜೆನ್ಸೀಸ್)