

Divya Unni: ಸುಮಾರು 11,600 ಭರತನಾಟ್ಯ ನೃತ್ಯಗಾರರ ತಂಡವನ್ನು ಮುನ್ನಡೆಸಿದ ಮಲಯಾಳಂ ಚಿತ್ರನಟಿ ದಿವ್ಯಾ ಉನ್ನಿ ಅವರ ಹೆಸರು ಇದೀಗ ಗಿನ್ನಿಸ್ ವಿಶ್ವದಾಖಲೆಯಲ್ಲಿ ರಾರಾಜಿಸಿದೆ. ಈ ಹಿಂದಿನ ದಾಖಲೆಯನ್ನು ಮುರಿದು ತಮ್ಮದೇ ನೂತನ ದಾಖಲೆ ನಿರ್ಮಿಸಿರುವ ದಿವ್ಯಾಗೆ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.
ನಿನ್ನೆ (ಡಿ.29) ಕೇರಳದ ಕೊಚ್ಚಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸುಮಾರು 11,600 ನೃತ್ಯಪಟುಗಳೊಂದಿಗೆ 'ಮೃದಂಗನಾದಂ' ಎಂಬ ಹೆಸರಿನಡಿ ಭರತನಾಟ್ಯ ಪ್ರದರ್ಶನ ನೀಡಿದ ನಟಿ ದಿವ್ಯಾ ಉನ್ನಿ, ಈ ಹಿಂದೆ 10,176 ನೃತ್ಯಗಾರರನ್ನು ಒಳಗೊಂಡ ಭರತನಾಟ್ಯ ತಂಡ ನಿರ್ಮಿಸಿದ್ದ ಗಿನ್ನಿಸ್ ದಾಖಲೆಯನ್ನು ಮುರಿದಿದ್ದು, ತಮ್ಮ ತಂಡದ ದಾಖಲೆಯನ್ನು ಗಿನ್ನಿಸ್ ದಾಖಲೆ ಪಟ್ಟಿಗೆ ಸೇರಿಸಿರುವುದು ವಿಶೇಷ.
ದಿವ್ಯಾ ಉನ್ನಿ ನೇತೃತ್ವದ ನೃತ್ಯಗಾರರು ಜವಾಹರಲಾಲ್ ನೆಹರು ಕ್ರೀಡಾಂಗಣದ ಮಧ್ಯದಲ್ಲಿ ನಟಿಯೊಂದಿಗೆ ಪ್ರದಕ್ಷಿಣಾಕಾರವಾಗಿ ವೃತ್ತವನ್ನು ರಚಿಸಿ, ನೃತ್ಯ ಮಾಡಿರುವುದು ನೋಡುಗರನ್ನು ಸೆಳೆದಿದೆ. ನೃತ್ಯಕ್ಕೆ ಸಂಗೀತವನ್ನು ಅನೂಪ್ ಶಂಕರ್ ಸಂಯೋಜಿಸಿದ್ದು, ನೃತ್ಯಗಾರರೆಲ್ಲರೂ ರೇಷ್ಮೆ ನೀಲಿ ಸೀರೆಗಳಲ್ಲಿ ಕಂಗೊಳಿಸಿರುವುದು ಕ್ಯಾಮರಾ ಕಣ್ಣಿನಲ್ಲಿ ಅದ್ಭುತವಾಗಿ ಸೆರೆಯಾಗಿದೆ. ಒಟ್ಟು 8 ನಿಮಿಷಗಳ ಕಾಲ ನೃತ್ಯ ಪ್ರದರ್ಶನ ನಡೆದಿದೆ.
ಮೂಲತಃ ಮಲಯಾಳಂ ನಟಿ ಆದ ದಿವ್ಯಾ ಉನ್ನಿ ಅವರು ಕನ್ನಡ ಚಿತ್ರನಟ, ನಿರ್ದೇಶಕ ಎಸ್. ನಾರಾಯಣ್ ನಟಿಸಿ, ನಿರ್ದೇಶಿಸಿದ 'ಬಾನಲ್ಲೂ ನೀನೇ ಭುವಿಯಲ್ಲೂ ನೀನೇ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).