ನಾನು ಅವನ ಅಕ್ಕ ಮಾತ್ರ ಅಲ್ಲ...ನಕುಲ್​ಗೆ 'ಪ್ರೇಮೋತ್ಸವ' ನಟಿ ದೇವಯಾನಿ ಹೀಗೆ ಹೇಳಿದ್ಯಾಕೆ?

devayani
Published on

ಹೈದ್ರಾಬಾದ್​: ಸ್ಯಾಂಡಲ್​ವುಡ್​​ ನಟ ಡಾ. ವಿಷ್ಣುವರ್ಧನ್ ನಾಯಕರಾಗಿದ್ದ 'ಪ್ರೇಮೋತ್ಸವ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದವರು ನಟಿ ದೇವಯಾನಿ.  ತಮಿಳು ಸಿನಿಮಾದಲ್ಲಿ  ಬ್ಯುಸಿಯಾಗಿದ್ದಾರೆ. ಈ ನಟಿ ಇದೀಗ ಒಂದು  ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದಾರೆ. 

ದೇವಯಾನಿ ಅವರ ಕಿರಿಯ ಸಹೋದರ ನಕುಲ್ ಅಭಿನಯದ ‘ವಾಸ್ಕೋ ಡಗಾಮಾ’ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸಹೋದರನ ಸಿನಿಮಾದ ಪ್ರಮೋಷನ್​ಗಾಗಿ ಆ ಕಾರ್ಯಕ್ರಮದಲ್ಲಿ ದೇವಯಾನಿ ಭಾಗವಹಿಸಿದ್ದರು. ನಕುಲ್ ಕುರಿತಾಗಿ ದೇವಯಾನಿ ಆಡಿದ ಮಾತುಗಳು ಗಮನ ಸೆಳೆಯುತ್ತಿದೆ.

ದೇವಯಾನಿ ಮಾತನಾಡಿ 'ನಾನು ನಕುಲ್‌ನ ಸಹೋದರಿ ಆದರೆ ಅವನು ನನ್ನ ಸ್ವಂತ ಮಗನಂತೆ, ಇಂದು ನಾನು ಅವನೊಂದಿಗೆ ನಿಂತಿರುವುದು ನಮ್ಮ ತಾಯಿಯ ಆತ್ಮಕ್ಕೆ ಸಂತೋಷ ನೀಡುತ್ತದೆ. ನಕುಲ್ ಸಿನಿಮಾ ಕಾರ್ಯಕ್ರಮಕ್ಕೆ ಇದೇ ಮೊದಲ ಸಲ ಬರುತ್ತಿದ್ದೇನೆ. ನಾವು ಅಕ್ಕ-ತಮ್ಮ ಆದರೂ ಕೂಡಾ ಆ ರೀತಿ ಸಮಯವನ್ನು ಕಳೆಯಲು ಸಾಧ್ಯವಾಗಿರಲಿಲ್ಲ. ಆ ಸಮಯದಲ್ಲಿ ನಾನು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದೆ. ಆ ಕ್ಷಣವನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ'  ಎಂದಿದ್ದಾರೆ.

ನನ್ನ ಬಳಿ ಹೇಳಲು ಪದಗಳಿಲ್ಲ. ಬಹಳ ಸಂತೋಷ. ನಕುಲ್ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನ್ನ "ಚಿನ್ನತಂಬಿ" ನಕುಲ್ ಬಹುಮುಖ ಪ್ರತಿಭೆ. ನಾನು ಅವನ ದೊಡ್ಡ ಅಭಿಮಾನಿ. ಬಾಯ್ಸ್ ಎಂಬ ಸಿನಿಮಾದಿಂದ ಹಿಡಿದು ಕಾದಲಿನ್ ವಿಳುಂದೇನ್ ಎಂಬ ಸಿನಿಮಾದವರೆಗೆ ನಕುಲ್​ನಲ್ಲಿ ಉಂಟಾದ ಬದಲಾವಣೆ ನಿಜಕ್ಕೂ ಅದ್ಭುತ. ಅವನು ತನ್ನ ಆತ್ಮವಿಶ್ವಾಸ ಮತ್ತು ಸಾಮರ್ಥ್ಯವನ್ನು ತೋರಿಸಲು ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದ್ದಾನೆ. ಒಬ್ಬ ಒಳ್ಳೆಯ ನಿರ್ದೇಶಕ ಮತ್ತು ಒಳ್ಳೆಯ ಕಥೆಯಿಂದ ಬಂದಾಗ ಒಬ್ಬ ನಟನ ಭವಿಷ್ಯ ಬದಲಾಗುತ್ತದೆ. ಎಲ್ಲರಿಗೂ ಒಂದು ಸಮಯ ಬರುತ್ತದೆ. ನಕುಲ್ ಉತ್ತಮ ಗಾಯಕ, ನೃತ್ಯದಲ್ಲೂ ನೈಪುಣ್ಯತೆಯಿದೆ. ಸಂಗೀತ ಸಂಯೋಜನೆಯನ್ನೂ ಮಾಡುತ್ತಾನೆ. ಒಟ್ಟಾಗಿ ಹೇಳಬೇಕೆಂದರೆ ಪ್ರತಿಭಾವಂತ ಎಂದು ಹೇಳಿದ್ದಾರೆ.

ಈ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಅಪ್ಪ, ಅಮ್ಮ ಜತೆಗಿಲ್ಲ, ಆದರೆ ಅವರು ಇದನ್ನೆಲ್ಲಾ ದೂರದಲ್ಲೇ ನಿಂತು ನೋಡಿ ಸಂತೋಷ ಪಡುತ್ತಾರೆ. ನಾನು ಅವನ ಜತೆಗಿದ್ದೇನಲ್ಲ ಎಂದು ಅಪ್ಪ ಅಮ್ಮ ಖಂಡಿತವಾಗಿಯು ಖುಷಿಪಡುತ್ತಾರೆ. ಅವರಿಲ್ಲದಿದ್ದರೆ ನಾನು ಚಿತ್ರರಂಗಕ್ಕೆ ಬರುತ್ತಿರಲಿಲ್ಲ. ನಕುಲ್​ಗೆ ನನ್ನ ಶುಭ ಹಾರೈಕೆ, ಮುಂದೆ ಒಳ್ಳೆ ಸಿನಿಮಾದ ಅವಕಾಶಗಳು ಒಲಿದು ಬರಲಿ. ತಾಳ್ಮೆಯಿಂದ ಕಾದ ನಿನಗೆ ಪ್ರತಿಫಲ ಸಿಗಲಿದೆ. ಈ ಸಂದೇಶ ಪ್ರತಿಯೊಬ್ಬರ ಜೀವನಕ್ಕೂ ಅನ್ವಯಿಸುತ್ತದೆ. ಎಲ್ಲರೂ ನನ್ನ ಸಹೋದರನನ್ನು ಬೆಂಬಲಿಸಬೇಕು. ನೀನು ಬೆಳೆಯಬೇಕು, ಎಲ್ಲರ ಜೀವನದಲ್ಲೂ ಎರಡನೇ ಅವಕಾಶ ಬಂದೇ ಬರುತ್ತದೆ. ಅದು ಉಳಿದವುಗಳಿಗಿಂತ ಉತ್ತಮವಾಗಿರುತ್ತದೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

ದೇವಯಾನಿಯ ಮಾತುಗಳನ್ನು ಕೇಳಿ ವೇದಿಕೆಯಲ್ಲಿದ್ದ ನಕುಲ್ ಭಾವುಕರಾದರು.ಅಕ್ಕನ ಪ್ರತಿ ಮಾತನ್ನೂ ಕಣ್ಣಲ್ಲಿ ನೀರು ತುಂಬಿ ಆಲಿಸುತ್ತದ್ದ ನಕುಲ್ ದೇವಯಾನಿಯನ್ನು ಅಪ್ಪಿಕೊಂಡು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದರು.

ಶಂಕರ್ ನಿರ್ದೇಶನದ ಬಾಯ್ಸ್ ಚಿತ್ರದ ಮೂಲಕ ನಕುಲ್ ಚಿತ್ರರಗಕ್ಕೆ ಪಾದಾರ್ಪಣೆ ಮಾಡಿದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಾದಲ್ ವಿಳುಂದೇನ್ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾದ "ನಾಕು ಮುಕ್ಕ" ಎಂಬ ಹಾಡು ಇಂದಿಗೂ ಜನಪ್ರಿಯತೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net