ಕಡೆಗೂ ಹುಡುಕಾಟಕ್ಕೆ ಸಿಕ್ಕಿತು ಮುಕ್ತಿ! ಇದೇ ಕಾರಣದಿಂದ ಅಧಿಕೃತ ರಿಲೀಸ್​ ಡೇಟ್​ ಘೋಷಿಸಿದ 'ಪುಷ್ಪ 2' ಚಿತ್ರತಂಡ | Pushpa 2

pushpa 2
Published on

ಹೈದರಾಬಾದ್​​: ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ 'ಪುಪ್ಪ 2' (Pushpa 2) ಚಿತ್ರ ಇದೀಗ ತೆರೆಗೆ ಬರಲು ಸಿದ್ಧಗೊಳ್ಳುತ್ತಿದೆ. ಬಹಳ ದಿನಗಳಿಂದ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲು ಮೀನ-ಮೇಷ ಎಣಿಸುತ್ತಿದ್ದ ಚಿತ್ರ ತಯಾರಕರು ಇದೀಗ ದಿಢೀರ್​ ಎಂಬಂತೆ ರಿಲೀಸ್ ಡೇಟ್​ ಪ್ರಕಟಿಸಿದ್ದು, ಹಲವರಲ್ಲಿ ಆಶ್ಚರ್ಯಕ್ಕಿಂತ ಖುಷಿ ತಂದಿದೆ.

ಈ ಹಿಂದಿನಿಂದಲೂ 'ಪುಷ್ಪ 2' ಚಿತ್ರದಲ್ಲಿರುವ ವಿಶೇಷ ಹಾಡಿಗೆ ಯಾವ ನಾಯಕಿಯೂ ಆಯ್ಕೆಯಾಗುತ್ತಿರಲಿಲ್ಲ. ಚಿತ್ರತಂಡ ಆಯ್ಕೆ ಮಾಡಿದ ನಟಿಯರು ತಾವು ಇಂತಹ ಸಾಂಗ್​ನಲ್ಲಿ ಕಾಣಿಸಿಕೊಳ್ಳಲು ಇಚ್ಚಿಸುವುದಿಲ್ಲ ಎಂದು ತಮ್ಮದೇ ಆದ ವೈಯಕ್ತಿಕ ಕಾರಣಗಳನ್ನು ಕೊಟ್ಟು,  ಬಿಗ್ ಆಫರ್​ ಅನ್ನು ತಿರಸ್ಕರಿಸಿದ್ದರು. ಇದರಿಂದಲೇ ಚಿತ್ರದ ರಿಲೀಸ್​ ಡೇಟ್​ ಕೂಡ ಆಗಸ್ಟ್​ 15ರಿಂದ ಡಿಸೆಂಬರ್​ ತಿಂಗಳಿಗೆ ಮುಂದೋಗಿರಬಹುದು ಎಂಬ ಮಾತುಗಳು ಜಾಲತಾಣಗಳಲ್ಲಿ ಕೇಳಿಬಂದಿತ್ತು. ಪುಷ್ಪ 2 ಸಿನಿಮಾದ ವಿಶೇಷ ಹಾಡಿಗೆ ಯಾರು ಆಯ್ಕೆ ಆಗುತ್ತಿಲ್ಲ ಎಂಬ ಗೊಂದಲದಲ್ಲಿದ್ದ ಚಿತ್ರತಂಡಕ್ಕೆ ಬಾಲಿವುಡ್​ ನಟಿ ಶ್ರದ್ಧಾ ಕಪೂರ್​, ತಾವು ಈ ಸಾಂಗ್​ನಲ್ಲಿ ನಟಿಸಲು ರೆಡಿಯಿದ್ದೇನೆ ಎಂದು ಗ್ರೀನ್​ ಸಿಗ್ನಲ್ ಕೊಟ್ಟಿರುವುದಾಗಿ ಇದೀಗ ವರದಿಯಾಗಿದೆ.

ಈ ವಿಶೇಷ ಹಾಡಿಗೆ ಬಾಲಿವುಡ್​ ಸೇರಿದಂತೆ ಇತರೆ ಚಿತ್ರರಂಗದ ಪ್ರಮುಖ ನಾಯಕಿಯರನ್ನು ಸಂಪರ್ಕಿಸಿದ್ದ ಚಿತ್ರ ತಯಾರಕರು ಕಡೆಗೆ ಶ್ರದ್ಧಾ ಅವರನ್ನೇ ಫೈನಲ್​ ಮಾಡಿಕೊಂಡಿದೆ. ಈ ಹಿಂದೆ, ಸಮಂತಾ ಮತ್ತು ಅಲ್ಲು ಅರ್ಜುನ್, ಪುಷ್ಪ 1ರ ಐಟಂ ಸಾಂಗ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು.ಅಂದು 'ಊ ಅಂಟಾವ' ಹಾಡು​ ಭಾರೀ ಹಿಟ್ ಆಯಿತು. ಅಲ್ಲದೆ, ದೇಶಾದ್ಯಂತ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ಗಳಿಸಿತ್ತು. ಒಂದು ವೇಳೆ ಶ್ರದ್ಧಾ ಮತ್ತು ಅಲ್ಲು ಅರ್ಜುನ್‌ ಜೋಡಿ ಖಿಚಿತವಾಗಿದ್ದರೆ  ಹಾಡು ಭರ್ಜರಿ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಫ್ಯಾನ್ಸ್​ ನಿರೀಕ್ಷಿಸಿದ್ದಾರೆ.

ಇದೇ ಡಿಸೆಂಬರ್​ 6ಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿರುವ ಪುಷ್ಪ 2 ಚಿತ್ರ, ಜಾಗತಿಕವಾಗಿ ಅಭಿಮಾನಿಗಳ ಮುಂದೆ ಹಾಜರಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net