

ಗೋವಾ: ಫ್ರೆಂಡ್ಸ್ ಜತೆ ಗೋವಾಗೆ ತೆರಳಿದ್ದ ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 42 ವರ್ಷದ ಈಕೆ ನಟಿಯಾಗಿದ್ದು, ಬಿಗ್ಬಾಸ್ ಸ್ಪರ್ಧಿಯೂ ಆಗಿದ್ದರು. ಸೋಮವಾರ ರಾತ್ರಿ ಗೋವಾದಲ್ಲಿ ಈ ಪ್ರಕರಣ ನಡೆದಿದೆ.
ಚಂಡಿಗಢ ಮೂಲದ ನಟಿ, ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಕೆಲವು ಫ್ರೆಂಡ್ಸ್ ಜತೆ ಗೋವಾಗೆ ಭೇಟಿ ನೀಡಿದ್ದು, ಅಲ್ಲಿನ ಹೋಟೆಲೊಂದರಲ್ಲಿದ್ದಾಗ ನಿನ್ನೆ ಅಸ್ವಸ್ಥಗೊಂಡು ಸಾವಿಗೀಡಾಗಿದ್ದಾರೆ. ಸನ್ನಿವೇಶದ ಪ್ರಕಾರ ಹೃದಯಾಘಾತಕ್ಕೆ ಒಳಗಾಗಿದ್ದು ಕಂಡುಬಂದಿದೆ. ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತಿಲ್ಲ, ಅದಾಗ್ಯೂ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋನಾಲಿ ಫೋಗಟ್ 2019ರಲ್ಲಿ ಹರಿಯಾಣದ ಅದಂಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಕುಲ್ದೀಪ್ ಬಿಷ್ಣೊಯ್ ಎದುರು ಸೋತಿದ್ದರು. ಕಳೆದ ತಿಂಗಳು ಕುಲ್ದೀಪ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದು, ಉಪ ಚುನಾವಣೆಯಲ್ಲಿ ಸೋನಾಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು.
ಟಿಕ್ ಟಾಕ್ ವಿಡಿಯೋ ಮೂಲಕ ಜನಪ್ರಿಯತೆ ಪಡೆದಿದ್ದ ಸೋನಾಲಿ, ಟಿವಿ ನಿರೂಪಕಿ ಆಗಿದ್ದರು. ನಂತರ ಬಿಜೆಪಿಗೆ ಸೇರಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ಕಿರುತೆರೆ, ವೆಬ್ ಸೀರಿಸ್ಗಳಲ್ಲಿ ನಟಿಸಿದ್ದ ಈಕೆ, 2020ರಲ್ಲಿ ಬಿಗ್ಬಾಸ್ನಲ್ಲಿ ಸ್ಪರ್ಧಿಯಾಗಿದ್ದರು. ಈಕೆ ಪುತ್ರಿ ಯಶೋಧರ ಫೋಗಟ್ ಅವರನ್ನು ಅಗಲಿದ್ದಾರೆ. ದುರಂತವೆಂದರೆ ಸೋನಾಲಿ ಪತಿ ಸಂಜಯ್ ಫೋಗಟ್ ತನ್ನ 42ನೇ ವಯಸ್ಸಿನಲ್ಲಿ ಅಂದರೆ 2016ರಲ್ಲಿ ಫಾರ್ಮ್ಹೌಸ್ನಲ್ಲಿ ಸಾವಿಗೀಡಾಗಿದ್ದರು.