ಅನ್ನದಾತೆ ಆಶಿಕಾ!; ‘ರೇಮೊ’ ಚಿತ್ರೀಕರಣದಲ್ಲಿ 10 ದಿನ ಅಡುಗೆ ಮಾಡಿದ ನಟಿ

Ashika
Published on

ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ ಚಿತ್ರ ‘ರೇಮೊ’. ಇತ್ತೀಚೆಗಷ್ಟೆ ಚಿತ್ರತಂಡ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕರಾದ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಇಶಾನ್, ‘ನಾನು, ಆಶಿಕಾ ಈ ಚಿತ್ರದಿಂದ ಬೆಸ್ಟ್ ಫ್ರೆಂಡ್ಸ್ ಆಗಿದ್ದೇವೆ. ದಕ್ಷಿಣ ಆಫ್ರಿಕಾದಲ್ಲಿ ಶೂಟಿಂಗ್ ಹೋಗಿದ್ದಾಗ ನಮಗೆ ಅಲ್ಲಿ ಊಟದ ಸಮಸ್ಯೆ ಎದುರಾಗಿತ್ತು. ನಾನು ಡಯಟ್​ನಲ್ಲಿದ್ದ ಕಾರಣ ಡಯಟ್ ಫುಡ್ ಸೇವಿಸಬೇಕಿತ್ತು. ಆದರೆ, ನಾನು ತೆಗೆದುಕೊಂಡು ಹೋಗಿದ್ದ ಪ್ರೋಟೀನ್ ಉಂಡೆಗಳನ್ನು ನಿರ್ದೇಶಕ ಪವನ್ ಖಾಲಿ ಮಾಡಿಬಿಟ್ಟರು. ಆಗ ಆಶಿಕಾ ಹಲವು ದಿನಗಳ ಕಾಲ ಅವರು ಅಡುಗೆ ಮಾಡಿಕೊಳ್ಳುತ್ತಿದ್ದ ಸಿರಿಧಾನ್ಯದ ಅಡುಗೆಯನ್ನೇ ನನಗೂ ಕೊಟ್ಟರು’ ಎಂದು ಹೇಳಿಕೊಂಡರು.

ಇಶಾನ್ ಮಾತಿಗೆ ಧ್ವನಿಗೂಡಿಸಿದ ನಾಯಕಿ ಆಶಿಕಾ ರಂಗನಾಥ್, ‘ಸುಮಾರು ಹತ್ತು ದಿನಗಳ ಕಾಲ ಮಿಲೆಟ್ಸ್ ಮಾಡಿ ಕೊಟ್ಟಿದ್ದೆ ಅಷ್ಟೇ. ಹೊರದೇಶಗಳಿಗೆ ಚಿತ್ರೀಕರಣಕ್ಕಾಗಿ ಹೋದಾಗ ಡಯಟ್ ಮುಂದುವರಿಸುವುದು ಕಷ್ಟ. ನನಗೆ ದಕ್ಷಿಣ ಆಫ್ರಿಕಾದಲ್ಲಿ ಅಡುಗೆ ಮಾಡಿಕೊಳ್ಳುವ ಸೌಲಭ್ಯವಿತ್ತು. ನನಗೆ ಹೇಗಿದ್ದರೂ ಅಡುಗೆ ಮಾಡಿಕೊಳ್ಳುತ್ತಿದ್ದೆ, ಹಾಗೇ ಇಶಾನ್​ಗೂ ಕೊಡುತ್ತಿದ್ದೆ ಅಷ್ಟೇ’ ಎಂದು ನಕ್ಕರು. ಇಶಾನ್, ಆಶಿಕಾ ಜತೆಗೆ ‘ರೇಮೊ’ ಚಿತ್ರದಲ್ಲಿ ರಾಜೇಶ್ ನಟರಂಗ, ಮಧೂ, ಶರತ್ ಕುಮಾರ್, ಅಚ್ಯುತ್ ಕುಮಾರ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ವೈದಿ ಛಾಯಾಗ್ರಹಣ, ಕೆಎಂ ಪ್ರಕಾಶ್ ಸಂಕಲನವಿದ್ದು, ಸಿಆರ್ ಮನೋಹರ್ ನಿರ್ವಿುಸಿದ್ದಾರೆ. ರೇಮೊ ಇದೇ ಶುಕ್ರವಾರ ತೆರೆಗೆ ಬರಲಿದೆ.

ಪ್ರೇಮಲೋಕ ನೆನಪಿಸಿದ ರೇಮೊ: ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ‘ನಮ್ಮ ಕನ್ನಡ ಚಿತ್ರರಂಗ ರಾಷ್ಟ್ರದ ಗಮನ ಸೆಳೆಯುತ್ತಿದೆ. ನಾನೂ ಐದು ಟೂರಿಂಗ್ ಟಾಕೀಸ್​ಗಳಲ್ಲಿದ್ದೆ. ಮುಂದಿನ ತಿಂಗಳು ಗ್ಲೋಬಲ್ ಮಾಲ್​ನಲ್ಲಿ, ನಂತರ ಡಿವಿನಿಟಿ ಮಾಲ್​ನಲ್ಲಿ ಏಳು ಸ್ಕ್ರೀನ್, ಮೈಸೂರಿನ ಸೋಲ್ ಸ್ಪೇಸ್​ನಲ್ಲಿ ಐದು ಸ್ಕ್ರೀನ್ ಮಲ್ಟಿಪ್ಲೆಕ್ಸ್​ಗಳನ್ನು ಪ್ರಾರಂಭಿಸುತ್ತಿದ್ದೇನೆ. ನಾನು ವಿತರಕನಾಗಿಯೂ ಕೆಲಸ ಮಾಡಿದ್ದೇನೆ. ರಾಜಕೀಯಕ್ಕೆ ಬಂದ ಬಳಿಕ ಚಿತ್ರರಂಗ ಬಿಟ್ಟೆ. ಆದರೆ ನಾನು ಬಿಟ್ಟರೂ, ಚಿತ್ರರಂಗ ನನ್ನನ್ನು ಬಿಡುತ್ತಿಲ್ಲ. ‘ಪ್ರೇಮಲೋಕ’ ಚಿತ್ರವನ್ನು ಮೂರ್ನಾಲ್ಕು ಬಾರಿ ನೋಡಿದ್ದೇನೆ. ‘ರೇಮೊ’ ‘ಪ್ರೇಮಲೋಕ’ವನ್ನು ನೆನಪಿಸಿತು’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net