ದಪ್ಪಗಿರುವುದೇ ನನಗೆ ಪ್ಲಸ್!: ದೇಹದ ಗಾತ್ರದಿಂದಲೇ ಒಳ್ಳೆಯ ಪಾತ್ರಗಳು ಬರುತ್ತಿವೆ ಎಂದ ನಟಿ ಅಂಜಲಿ ಆನಂದ್

ಅಂಜಲಿ ಆನಂದ್​
ಅಂಜಲಿ ಆನಂದ್​
Published on

ಪ್ರಮುಖ ಮುಖ್ಯಾಂಶಗಳು

  • ದಪ್ಪ ಇರುವ ಕಾರಣಕ್ಕೆ ಅವಕಾಶಗಳನ್ನು ಹೆಚ್ಚಿಸಿಕೊಂಡ ನಟಿ
  • ಧಮಾಲ್ 4ನಲ್ಲಿ ನಟಿಸಿರುವ ಅಂಜಲಿ ಆನಂದ್
  • ನಟಿಯ ದೇಹದ ಗಾತ್ರಕ್ಕೆ ಟ್ರೋಲ್ ಮಾಡುವವರ ವಿರುದ್ಧ ಕಿಡಿ
ದಪ್ಪ ಮತ್ತು ಎತ್ತರ ಇರುವುದು ಕೆಲ ನಟಿಯರಿಗೆ ವರವಾದರೆ, ಇನ್ನು ಕೆಲವರಿಗೆ ಶಾಪ. ಇದರಿಂದಾಗಿ ಕೆಲವರು ಬಾಡಿ ಶೇಮಿಂಗ್ ಎದುರಿಸುವ ಜತೆಗೆ ಒಳ್ಳೆಯ ಪಾತ್ರಗಳನ್ನು ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ. ಆದರೆ, ಈ ಮಾತು ಹಿಂದಿಯ ‘ಬೆಲ್‌ಬಾಟಂ’, ‘ರಾಕಿ ಜೌರ್ ರಾಣಿ ಕೀ ಪ್ರೇಮ್ ಕಹಾನಿ’ ನಟಿ ಅಂಜಲಿ ಆನಂದ್ ವಿಚಾರಕ್ಕೆ ತದ್ವಿರುದ್ಧ. ಏಕೆಂದರೆ, ಎತ್ತರ ಮತ್ತು ದಪ್ಪ ಇರುವುದೇ ಅವರಿಗೆ ವರವಾಗಿದ್ದು ಜತೆಗೆ ಹಿಂದಿ ಸಿನಿಮಾಗಳಲ್ಲಿ ಒಳ್ಳೆಯ ಪಾತ್ರಗಳು ಸಿಕ್ಕಿವೆಯಂತೆ. ಈ ಬಗ್ಗೆ ಇತ್ತೀಚೆಗೆ ನಟಿ ಅಂಜಲಿ, ‘ನಾನು ದಪ್ಪ ಇರುವ ಕಾರಣದಿಂದಲೇ ‘ಬೆಲ್ ಬಾಟಂ’ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು. ಭಯೋತ್ಪಾದಕನ ಮೇಲೆ ನಾನು ಬಿದ್ದು, ಆತ ನುಜ್ಜುಗುಜ್ಜಾಗುವ ಹಾಸ್ಯಮಯ ದೃಶ್ಯ ಅದು. ಇತ್ತೀಚೆಗೆ ಅಂತಹ ಪಾತ್ರಗಳೇ ನನಗೆ ಸಿಗುತ್ತಿವೆ. ಆದರೆ, ಜನ ನನ್ನ ಪಾತ್ರ ನೋಡಿ ಅಪಹಾಸ್ಯ ಮಾಡಿದಾಗ ನೋವಾಗುತ್ತದೆ. ನನ್ನ ನಟನೆ ನೋಡಿ ಯಾರೂ ಮೆಚ್ಚಿಕೊಳ್ಳುತ್ತಿಲ್ಲ. ಬದಲಾಗಿ ದೇಹದ ಆಕಾರದ ಮೂಲಕ ನನ್ನನ್ನು ನಿರ್ಣಯಿಸುತ್ತಾರೆ. ವಾಸ್ತವದಲ್ಲಿ ಇಂತಹ ಅವಮಾನಗಳು ನನಗಷ್ಟೇ ಅಲ್ಲ ಐಶ್ವರ್ಯಾ ರೈ, ದೀಪಿಕಾ ಪಡುಕೋಣೆಗೂ ಎದುರಾಗಿವೆ. ಶಾರುಖ್ ಖಾನ್, ಅಮಿತಾಭ್ ಬಚ್ಚನ್ ಕೂಡ ಎಷ್ಟೋ ಬಾರಿ ಟೀಕೆಗಳನ್ನು ಎದುರಿಸಿದ್ದಾರೆ. ಕೆಲವರ ಅಭಿಪ್ರಾಯಗಳು ನಮ್ಮ ವಾಸ್ತವತೆಯನ್ನು ಬದಲಾಯಿಸುವುದಿಲ್ಲ’ ಎಂದಿದ್ದು, ‘ದಪ್ಪ ಇರುವ ಕಾರಣಕ್ಕೆ ‘‘ರಾಕಿ ಜೌರ್ ರಾಣಿ ಕೀ ಪ್ರೇಮ್ ಕಹಾನಿ’ ಚಿತ್ರದ ಪಾತ್ರ ಹೆಚ್ಚು ಗಮ ನಸೆಳೆದು, ಪ್ರಸಿದ್ಧಳಾದೆ’ ಎಂದು ಹೇಳಿಕೊಂಡಿದ್ದಾರೆ. ಸದ್ಯ ನಟಿ ‘ಧಮಾಲ್ 4’ನಲ್ಲಿ ಅಭಿನಯಿಸಿದ್ದು, ಕಳೆದ ವಾರವಷ್ಟೇ ಸಿನಿಮಾ ರಿಲೀಸ್ ಆಗಿದೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net