

ಮುಂಬೈ: ಮುಕೇಶ್ ಅಂಬಾನಿ-ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭವು ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆಂಷನ್ ಸೆಂಟರ್ನಲ್ಲಿ ನಡೆಯಲಿದ್ದು, ವಿವಾಹ ಮಹೋತ್ಸವು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಮದುವೆ ಕಾರ್ಯಕ್ರಮಕ್ಕೆ ಪ್ಯಾನ್ ಇಂಡಿಯಾ ನಟ ಯಶ್ರನ್ನು ಆಹ್ವಾನಿಸಲಾಗಿದ್ದು, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಪಾಲ್ಗೊಳ್ಳಲು ಪತ್ನಿ ರಾಧಿಕಾ ಜೊತೆ ಯಶ್ ಮುಂಬೈಗೆ ಬಂದು ಇಳಿದಿದ್ದಾರೆ. ಈ ವೇಳೆ ಅವರ ಟಾಕ್ಸಿಕ್ ಚಿತ್ರದ ಲುಕ್ ರಿವೀಲ್ ಆಗಿದೆ.
ಕೆಜಿಎಫ್-2 ಬಳಿಕ ನಟ ಯಶ್ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಟಾಕ್ಸಿಕ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದು, ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಕೆಜಿಎಫ್ ಚಿತ್ರಕ್ಕಾಗಿ ಉದ್ದನೆಯ ಗಡ್ಡ ಹಾಗೂ ಕೂದಲು ಬಿಟ್ಟುಕೊಂಡು ಗಮನ ಸೆಳೆದಿದ್ದ ನಟ ಯಶ್ ಇದೀಗ ಹೊಸ ಸಿನಿಮಾಗಾಗಿ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಈ ಲುಕ್ ಸಖತ್ ವೈರಲ್ ಆಗುತ್ತಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದ ಫಸ್ಟ್ಲುಕ್ ಹಾಗೂ ಪೋಸ್ಟರ್ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಡ್ರಗ್ಸ್ ಸಾಮ್ರಾಜ್ಯದ ಕುರಿತಾದ ಚಿತ್ರ ಎಂದು ಸಿನಿರಸಿಕರು ಊಹಿಸಿದ್ದಾರೆ. ಇದರಲ್ಲಿ ಭರ್ಜರಿ ಆ್ಯಕ್ಷನ್ ಕೂಡ ಇರಲಿದ್ದು, ಈ ಚಿತ್ರಕ್ಕಾಗಿ ಯಶ್ ಅವರ ಲುಕ್ ಹೇಗಿರಲಿದೆ ಎಂದು ಅನುಮಾನ ಮೂಡಲು ಶುರುವಾಗಿತ್ತು. ಇದೀಗ ಅದಕ್ಕೆಲ್ಲಾ ಉತ್ತರ ದೊರೆತ್ತಿದ್ದು, ರಾಕಿ ಭಾಯ್ನ ಹೊಸ ಹೇರ್ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ.
ಯಶ್ ಅವರ ಹೊಸ ಹೇರ್ಸ್ಟೈಲ್ ನೋಡುವುದಾರೆ ಉದ್ದನೆಯ ಕೂದಲನ್ನು ಶಾರ್ಟ್ ಮಾಡಿಸಿದ್ದು, ಅವರ ಗಡ್ಡದ ಲುಕ್ ಸ್ವಲ್ಪ ಬದಲಾಗಿದೆ. ಅವರ ಈ ಹೊಸ ಹೇರಸ್ಟೈಲ್ ಯಾವ ರೀತಿ ಟ್ರೆಂಡ್ ಸೃಷ್ಟಿಸಲಿದೆ ಎಂದು ಕಾದು ನೋಡಬೇಕಿದೆ. ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡುತ್ತಿರುವ ಟಾಕ್ಸಿಕ್ ಸಿನಿಮಾವು 2025ರ ಏಪ್ರಿಲ್ನಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.