ಪತ್ನಿಯನ್ನು ಅಪಹಾಸ್ಯ ಮಾಡಿದವನ ಕಪಾಳಕ್ಕೆ ಬಾರಿಸಿದ ನಟ; ಆಸ್ಕರ್ ಇತಿಹಾಸದಲ್ಲಿ ಕಪ್ಪುಚುಕ್ಕೆ!

Will Smith
Published on

ನವದೆಹಲಿ: ಹಾಸ್ಯ ಮಾಡುವವರು ಕೆಟ್ಟದಾಗಿ ಮಾತನಾಡಿದರೆ ಏನಾಗುತ್ತದೆ ಎಂಬುದಕ್ಕೆ ಇಂದಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವೇ ಸಾಕ್ಷಿಯಾಗಿದೆ. ಕಾಮಿಡಿಯನ್​ ಒಬ್ಬರು ನಟನೊಬ್ಬರ ಪತ್ನಿಯನ್ನು ಅಪಹಾಸ್ಯ ಮಾಡಿದ್ದಕ್ಕೆ ಪತಿ ವೇದಿಕೆ ಮೇಲೇರಿ ಆತನ ಕಪಾಳಕ್ಕೆ ಬಾರಿಸಿದ ಪ್ರಸಂಗ ನಡೆದಿದೆ.

ಕ್ರಿಸ್ ರಾಕ್ ಕಪಾಳಮೋಕ್ಷಕ್ಕೀಡಾದ ಕಾಮಿಡಿಯನ್​. ಈತ ನಟಿ ಜಾಡಾ ಪಿಂಕೆಟ್​ ಸ್ಮಿತ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಆಗ ಅಲ್ಲೇ ಜತೆಗಿದ್ದ ಪತಿ, ನಟ ವಿಲ್​ ಸ್ಮಿತ್ ಸೀದಾ ವೇದಿಕೆ ಬಳಿಗೆ ಕ್ರಿಸ್​ ರಾಕ್​ನ ಕಪಾಳಕ್ಕೆ ಜೋರಾಗಿ ಬಾರಿಸಿದ್ದಲ್ಲದೆ, ಖಡಕ್​ ಆಗಿ ಎಚ್ಚರಿಕೆ ಕೊಟ್ಟು ಬಂದಿದ್ದಾರೆ.  ಕಿಂಗ್​ ರಿಚರ್ಡ್​ ಸಿನಿಮಾದಲ್ಲಿನ ನಟನೆಗಾಗಿ ವಿಲ್​ ಸ್ಮಿತ್ ಈ ಸಲದ ಆಸ್ಕರ್​ನಲ್ಲಿ ಉತ್ತಮ ನಟ ಪ್ರಶಸ್ತಿ ಗಳಿಸಿದ್ದಾರೆ.

ಜಾಡಾ ಅವರ ಟೈಟ್​ ಆಗಿ ಕ್ರಾಪ್​ ಮಾಡಿರುವ ಕೇಶವನ್ನು ಡೆಮಿ ಮೂರ್​ ಅವರಿಗೆ ಹೋಲಿಸಿ ಕ್ರಿಸ್​ ರಾಕ್​ ತಮಾಷೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ವಿಲ್​ ಸ್ಮಿತ್​ ಕೆನ್ನೆಗೆ ಹೊಡೆದಿದ್ದಾರೆ. ಮಾತ್ರವಲ್ಲ, ನಿನ್ನ ಕೆಟ್ಟ ಬಾಯಿಯಲ್ಲಿ ನನ್ನ ಹೆಂಡತಿಯ ಹೆಸರು ಹೇಳಬೇಡ ಎಂದೂ ಗದರಿದ್ದಾರೆ.

ಆಸ್ಕರ್​ ಇತಿಹಾಸದಲ್ಲೇ ಇಂಥದ್ದೊಂದು ಘಟನೆ ನಡೆದಿದ್ದು, ಇದೇ ಮೊದಲು ಎನ್ನಲಾಗುತ್ತಿದೆ. ಮಾತ್ರವಲ್ಲ, ಈ ಹಠಾತ್ ಹೊಡೆತದ ದೃಶ್ಯ ವೈರಲ್ ಆಗಿ ಸಾರ್ವಜನಿಕರು ಇದರ ಬಗ್ಗೆ ಮಾತನಾಡಲಾರಂಭಿಸಿದ್ದು, ಇದು ಕಾರ್ಯಕ್ರಮದಲ್ಲಿ ನಿಜವಾಗಿ ನಡೆದಿರುವುದೇ ಅಥವಾ ಈ ರೀತಿಯ ಸನ್ನಿವೇಶ ಪೂರ್ವಯೋಜಿತವೇ ಎಂಬ ಚರ್ಚೆಯೂ ನಡೆಯುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net