ಜೈಲಿನಲ್ಲಿರುವ ದರ್ಶನ್​ ಭೇಟಿಯಾದ ನಟ ವಿನೋದ್​ ಪ್ರಭಾಕರ್​; ಕೊಟ್ಟ ಮೊದಲ ಪ್ರತಿಕ್ರಿಯೆ ಇದು

Untitled design - 2024-06-24T141519.245
Published on

ಬೆಂಗಳೂರು: ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್​ರನ್ನು ನೋಡಲು ಇಂದು ಕನ್ನಡ ಚಿತ್ರರಂಗದ ಹಿರಿಯ ನಟ ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್​ ಆಗಮಿಸಿದ್ದು, ದರ್ಶನ್​ ಕಂಡು, ಕೆಲ ಸಮಯ ಮಾತನಾಡಿಸಿ, ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಮಾಧ್ಯಮಗಳ ಮುಂದೆ ಮಾತನಾಡಿದರು.

ನಟ ದರ್ಶನ್ ಭೇಟಿಯಾದ ಬಳಿಕ ಮಾತನಾಡಿದ ನಟ ವಿನೋದ್ ಪ್ರಭಾಕರ್, ಮೃತ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಭಗವಂತ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ತುಂಬಲಿ. ದರ್ಶನ್ ಅವರನ್ನು ಭೇಟಿ ಮಾಡಿ ನಾಲ್ಕು ತಿಂಗಳೇ ಆಗಿತ್ತು. ಅವರ ಜನ್ಮದಿನದಂದು ಭೇಟಿ ಮಾಡಿದ್ದು ಬಿಟ್ಟರೇ ಇವತ್ತೇ ನೋಡುತ್ತಿರುವುದು. ಮಾಧ್ಯಮಗಳಲ್ಲಿ ಸುದ್ದಿ ಬರುವುದನ್ನು ನೋಡಿ ಈ ವಿಚಾರ ತಿಳಿದುಕೊಂಡೆ. ಪೊಲೀಸ್ ಸ್ಟೇಷನ್​ಗೆ ಹೋಗಿ ಭೇಟಿಯಾಗಲು ಪ್ರಯತ್ನ ಮಾಡಿದೆ ಎಂದರು.

ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಭೇಟಿಯಾದೆ. ದರ್ಶನ್ ಅವರು ಮೌನವಾಗಿಯೇ ಇದ್ದರು. ನಾನು ಹೋದಾಗ, 'ಏನ್ ಟೈಗರ್ ಅಂತ ಹೇಳಿದ್ರು' ಅಷ್ಟೇ ಮಾತನಾಡಿದ್ದು. ಅವರಿಗೆ ಶೆಕ್ ಹ್ಯಾಂಡ್ ಮಾಡಿ, ಅಲ್ಲಿಂದ ಹೊರಬಂದೆ. ಪ್ರಕರಣ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವುದಷ್ಟೇ ನನಗೂ ಕೂಡ ಗೊತ್ತಿರುವುದು. ಈ ಪ್ರಕರಣ ಬಹಳ ಗಂಭೀರವಾಗಿದೆ. ಪೊಲೀಸ್ ತನಿಖೆಯಲ್ಲಿ ಕೇಸ್ ಇದೆ. ಈಗ ಏನು ಮಾತನಾಡಬೇಕು ಎಂಬ ಸ್ಪಷ್ಟತೆ ನನಗಿಲ್ಲ. ಅದಕ್ಕೆ ಅವರನ್ನು ಭೇಟಿ ಆಗುವವರೆಗೂ ಏನನ್ನು ಮಾತನಾಡಬಾರದು ಅಂದುಕೊಂಡಿದ್ದೆ ಎಂದರು.

ಕಾನೂನಿಗಿಂತ ಯಾರು ದೊಡ್ಡವರಿಲ್ಲ, ಎಲ್ಲರಿಗೂ ನ್ಯಾಯ ಸಿಗಲಿ. ನನಗೆ ದೇವರ ಮೇಲೆ ಅಪಾರವಾದ ನಂಬಿಕೆಯಿದೆ. ಅವರನ್ನು ಭೇಟಿ ಮಾಡಿ ನಾಲ್ಕು ತಿಂಗಳು ಕಳೆದಿವೆ. ನಾನು ನನ್ನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ. ರೇಣುಕಸ್ವಾಮಿ ಫ್ಯಾಮಿಲಿ ಒಂದು ಕಡೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಇತ್ತ ದರ್ಶನ್ ಕುಟುಂಬದ ಜತೆಗೆ ಅಭಿಮಾನಿಗಳು ಸಹ ನೋವಿನಲ್ಲಿದ್ದಾರೆ. ಯಾರಿಗೆ ಸಾಂತ್ವನ ಹೇಳಬೇಕು ಅಂತ ತಿಳಿಯಲಿಲ್ಲ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಾಗಿ ಮಾತನಾಡಲು ಆಗ್ತಿಲ್ಲ. ಒಂದು ಕ್ಷಣ ಅವರ ಮುಖ ನೋಡಿ ಶೆಕ್ ಹ್ಯಾಂಡ್ ಮಾಡಿ ಬಂದೆ. ಎಲ್ಲರಿಗೂ ಭಗವಂತ ಒಳ್ಳೆಯದನ್ನೇ ಮಾಡಲಿ ಎಂದು ಆಶಿಸುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net