""45' ನಿರಾಸೆಯಂತೂ ಮಾಡುವುದಿಲ್ಲ ಎಂಬ ಗ್ಯಾರಂಟಿ ಕೊಡುತ್ತೇನೆ' ಎನ್ನುವ ಶಿವಣ್ಣ, "ಪ್ರೇಕ್ಷಕರು ತುಂಬ ಎಂಜಾಯ್ ಮಾಡುತ್ತಾರೆ, ಕೊನೆಗೆ ಒಂದೊಳ್ಳೆ ಸಂದೇಶವನ್ನೂ ಕೊಂಡೊಯ್ಯುತ್ತಾರೆ. ಚಿತ್ರದಲ್ಲಿ ಒಂದು ಸುಂದರ ಸೀಕ್ರೆಟ್ ಇದೆ. ಜನರಿಗೆ ಇಷ್ಟವಾಗುವ ಭರವಸೆ ಇದೆ. ನಾನು ಚಿತ್ರರಂಗಕ್ಕೆ ನಾಯಕನಾಗಿ ಬಂದು 41 ವರ್ಷಗಳಾಗಿವೆ. ಜೀವನದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಅಪ್ಪಾಜಿ ಅವರ ಸಮಯದಿಂದಲೂ ಸಿನಿಮಾ ನೋಡಿದ್ದೇನೆ. ಈ ಚಿತ್ರದಲ್ಲಿ ಒಂದು ಶಕ್ತಿ ಇದೆ ಅದು ಜನರಿಗೆ ಇಷ್ಟವಾಗುತ್ತದೆ. ಚಿತ್ರದಲ್ಲಿ ಹೊಸ ಪ್ರಪಂಚವನ್ನೇ ನೋಡಬಹುದು. ನಾನು ರಿಲೀಸ್ಗೂ ಮುನ್ನ ಸಿನಿಮಾ ನೋಡುವುದಿಲ್ಲ. "ಜೋಗಿ', "ಟಗರು', "ವಜ್ರಕಾಯ', "ಭಜರಂಗಿ'.. ಹೀಗೆ ಯಾವ ಚಿತ್ರವನ್ನೂ ನೋಡಿರಲಿಲ್ಲ. ಆದರೆ, "45' ಡಬ್ಬಿಂಗ್ ಮಾಡುವಾಗ ತುಂಬ ಕುತೂಹಲ ಉಂಟಾಗುತ್ತಿತ್ತು. ಸಾಮಾನ್ಯವಾಗಿ ನಾನು ಒಂದೇ ದಿನದಲ್ಲಿ ಡಬ್ಬಿಂಗ್ ಮುಗಿಸುತ್ತೇನೆ. ಆದರೆ, "45'ಗೆ ಮೂರು ದಿನ ತೆಗೆದುಕೊಂಡೆ. ಡಬ್ಬಿಂಗ್ ಮುಗಿಸಿ ಚಿಕಿತ್ಸೆಗೆ ಅಮೆರಿಕಗೆ ತೆರಳಬೇಕಿತ್ತು. ಅದರ ನಡುವೆಯೂ ನಿಧಾನವಾಗಿ ಡಬ್ಬಿಂಗ್ ಮಾಡುತ್ತಾ ಈ ಉಪೇಂದ್ರ, ರಾಜ್ ಬಿ.ಶೆಟ್ಟಿ ಅವರಿರುವ ಸನ್ನಿವೇಶಗಳನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದೆ' ಎಂದು ಹೇಳಿಕೊಳ್ಳುತ್ತಾರೆ.