ಟಾಲಿವುಡ್​ ಸ್ಟಾರ್​​ ನಟನ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಎಂಟ್ರಿ! ಅಧಿಕೃತ ಮಾಹಿತಿ ಹಂಚಿಕೊಂಡ ಚಿತ್ರತಂಡ

ವಿಜಯವಾಣಿ - 2024-07-12T123925.488
Published on

ಆಂಧ್ರಪ್ರದೇಶ: ಇಂದು 62ನೇ ವಸಂತಕ್ಕೆ ಕಾಲಿಟ್ಟಿರುವ ಕನ್ನಡ ಚಿತ್ರರಂಗದ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​, ಇದೀಗ ಕನ್ನಡ ಚಿತ್ರಗಳಲ್ಲದೇ ಟಾಲಿವುಡ್​, ಕಾಲಿವುಡ್​ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಸೂಪರ್​ಸ್ಟಾರ್ ರಜನಿಕಾಂತ್ ನಟಿಸಿದ 'ಜೈಲರ್' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸೆಂಚುರಿ ಸ್ಟಾರ್​, ಬಳಿಕ ಧನುಷ್​ ಅವರ 'ಕ್ಯಾಪ್ಟನ್ ಮಿಲ್ಲರ್'​ನಲ್ಲಿ ನಟಿಸಿದ್ದರು. ಇದೀಗ ಟಾಲಿವುಡ್​ ಸ್ಟಾರ್​ ನಟನ ಸಿನಿಮಾದಲ್ಲಿಯೂ ಶಿವಣ್ಣ ಕಾಣಿಸಿಕೊಳ್ಳುತ್ತಾರೆ ಎಂಬುದು ದೃಢವಾಗಿದೆ.

ಮೆಗಾಪವರ್​ ಸ್ಟಾರ್​ ರಾಮ್ ಚರಣ್​ ಅಭಿನಯಿಸುತ್ತಿರುವ 'ಆರ್​ಸಿ 16' ಚಿತ್ರದಲ್ಲಿ ಶಿವರಾಜ್​ಕುಮಾರ್​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರ ತಯಾರಕರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಅವರು, ಹುಟ್ಟುಹುಬ್ಬದ ಶುಭಾಶಯಗಳು ಶಿವಣ್ಣ. ಆರ್​ಸಿ 16 ಸೆಟ್​​ಗೆ ಸ್ವಾಗತ ಎಂದು ಶುಭಕೋರಿದ್ದಾರೆ. ಇಂದಿಗೂ ತಾತ್ಕಾಲಿಕ ಟೈಟಲ್​ ಅನ್ನೇ ಮುಂದುವರೆಸಿಕೊಂಡು ಬಂದಿರುವ ಚಿತ್ರತಂಡ, ಕೆಲವು ತಿಂಗಳ ಹಿಂದೆಷ್ಟೇ ಚಿತ್ರದ ಪೂಜಾ ಸಮಾರಂಭ ನೆರವೇರಿಸಿತ್ತು.

'ಉಪ್ಪೇನಾ' ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬರಲಿರುವ 'ಆರ್​ಸಿ 16' ಚಿತ್ರದಲ್ಲಿ ರಾಮ್​ ಚರಣ್ ಮತ್ತು ಶಿವರಾಜ್​ಕುಮಾರ್​ ಕಾಂಬಿನೇಷನ್​ ಹೇಗಿರಲಿದೆ ಎಂಬುದನ್ನು ಚಿತ್ರ ಬಿಡುಗಡೆಯ ನಂತರ ಬೆಳ್ಳಿಪರದೆಯ ಮೇಲೆ ನೋಡಬೇಕಿದೆ. ಮೈತ್ರಿ ಮೂವಿ ಮೇಕರ್ಸ್​ ನಿರ್ಮಾಣದ ಈ ಚಿತ್ರಕ್ಕೆ ಎ.ಆರ್​. ರೆಹಮಾನ್ ಅವರ ಸಂಗೀತ ಸಂಯೋಜನೆಯಿದ್ದು, ನಾಯಕಿಯಾಗಿ ಜಾನ್ವಿ ಕಪೂರ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತ್ರಿಶಾ ಕೃಷ್ಣನ್, ವಿಜಯ್ ಸೇತುಪತಿ ಸೇರಿದಂತೆ ಮುಂತಾದವರ ತಾರಾಗಣ ಚಿತ್ರಕ್ಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net