

ಮೀರತ್: ಖ್ಯಾತ ಬಾಲಿವುಡ್ ನಟ ಸಲ್ಮಾನ್ಖಾನ್ ಅವರನ್ನು ಹತ್ಯೆ ಮಾಡಲು 30 ಲಕ್ಷ ರೂಪಾಯಿ ಸುಪಾರಿ ಪಡೆದಿರುವುದನ್ನು ಭೂಗತ ಪಾತಕಿ ರವಿ ಭೂರಾ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಗ್ಯಾಂಗ್ಸ್ಟರ್ ಶಿವಶಕ್ತಿ ನಾಯ್ಡು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪಾತಕಿ ರವಿ ಮಲ್ಲಿಕ್ ಉರುಫ್ ಭೂರಾ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ.
ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ಕುಂದ್ರಾ ಕಚೇರಿ ಲೂಟಿ ಮಾಡಿ 8 ಕೋಟಿ ಹಣ ಕದ್ದಿರುವುದಾಗಿ ಕೂಡ ಆತ ಒಪ್ಪಿಕೊಂಡಿದ್ದಾನೆ ಎಂದು ಮೀರತ್ನ ಅಪರ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ರಾಜಸ್ಥಾನದ ಸಂಪತ್ ನೆಹ್ರಾ ತಂಡದೊಂದಿಗೆ ಸೇರಿಕೊಂಡು ಬಾಲಿವುಡ್ ನಟ ಸಲ್ಮಾನ್ಖಾನ್ ಅವರನ್ನು ಹತ್ಯೆ ಮಾಡಲು 30 ಲಕ್ಷ ರೂಪಾಯಿ ಸುಪಾರಿಯನ್ನು ಆತ ಪಡೆದಿದ್ದ.
ಜನವರಿ 5, 2018 ರಲ್ಲಿ ಜೋಧ್ಪುರ್ ನ್ಯಾಯಾಲಯಕ್ಕೆ ಸಲ್ಮಾನ್ ಖಾನ್ ವಿಚಾರಣೆಗೆ ಹಾಜರಾಗುವ ವೇಳೆ ಹತ್ಯೆ ಮಾಡುವುದಾಗಿ ಹಣ ಪಡೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರವಿಭೂರಾ ನೀಡಿರುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಪರ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ
ಪಾತಕಿ ರವಿ ಭೂರಾ ಮುಜಾಫರ್ ನಗರದ ಬಳಿ ಇರುವ ರಾಯಷಿ ನಿವಾಸಿ. ದೆಹಲಿಯ ಜೀವನ ಪಾರ್ಕ್ ಕಾಲೋನಿಯಲ್ಲಿ ವಾಸವಾಗಿದ್ದ. ಕಳೆದ ಮಂಗಳವಾರ ಕಂಕರ್ ಖೇಡಾ ಬಳಿ ಎದುರಾಳಿ ಶಿವಶಕ್ತಿ ನಾಯ್ಡು ಎಂಬಾತನನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ. ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)